Saturday, November 14, 2026
Homeಜಿಲ್ಲೆಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧದ ಆರೋಪಗಳಿಗೆ ಗ್ರಾಮಸ್ಥರ ತೀವ್ರ ಆಕ್ಷೇಪ: 1,510 ಅಸಹಜ ಸಾವುಗಳ ಅಂಕಿ...

ಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧದ ಆರೋಪಗಳಿಗೆ ಗ್ರಾಮಸ್ಥರ ತೀವ್ರ ಆಕ್ಷೇಪ: 1,510 ಅಸಹಜ ಸಾವುಗಳ ಅಂಕಿ ಊಹಾಪೋಹ ಎಂದ ಶ್ರೀನಿವಾಸ್ ರಾವ್!

ಬೆಳ್ತಂಗಡಿ : ಧರ್ಮಸ್ಥಳದಲ್ಲಿ 2000ರಿಂದ 2014ರವರೆಗೆ 1,510 ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪಕ್ಕೆ ಧರ್ಮಸ್ಥಳದ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಖ್ಯೆ ಸತ್ಯಕ್ಕೆ ದೂರವಾಗಿದ್ದು, ಕೇವಲ ಊಹಾಪೋಹದ ಅಂಕಿ ಎಂದು ಧರ್ಮಸ್ಥಳ ನಿವಾಸಿ ಶ್ರೀನಿವಾಸ್ ರಾವ್ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಗ್ರಾಮಸ್ಥರ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಪ್ರಕರಣದ ನ್ಯಾಯ ಹೋರಾಟವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸೌಜನ್ಯ ಪ್ರಕರಣದ ತನಿಖೆ ಮತ್ತು ನ್ಯಾಯದ ಹೋರಾಟವನ್ನು ಬೇರೆ ಬೇರೆ ಆಯಾಮಗಳಿಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಇದರ ಜೊತೆಗೆ ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾಮಸ್ಥರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಸೌಜನ್ಯಳ ಕೊಲೆ ಮಾಡಿದವರು ಯಾರೇ ಆಗಿರಲಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಸೌಜನ್ಯಳಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

1,510 ಅಸಹಜ ಸಾವುಗಳ ಆರೋಪಕ್ಕೆ ಆಕ್ಷೇಪ

2000ರಿಂದ 2014ರವರೆಗೆ ಧರ್ಮಸ್ಥಳದಲ್ಲಿ 1,510 ಯುಡಿಆರ್ ಪ್ರಕರಣಗಳು ದಾಖಲಾಗಿವೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಇಲಾಖೆಯಿಂದ ದೊರೆತ ಮಾಹಿತಿಯ ಪ್ರಕಾರ ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿರುವುದು 374 ಪ್ರಕರಣಗಳು ಮಾತ್ರ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಶ್ರೀನಿವಾಸ್ ರಾವ್ ಸ್ಪಷ್ಟಪಡಿಸಿದರು.

1,510 ಎಂಬ ಸಂಖ್ಯೆ ಊಹಾಪೋಹದಿಂದ ಸೃಷ್ಟಿಸಲಾಗಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಈ ಸಂಖ್ಯೆಯ ಸತ್ಯಾಸತ್ಯತೆಯನ್ನು ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಆಧಾರರಹಿತ ಸುದ್ದಿಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಾಜ್ಯ ಹಾಗೂ ದೇಶಾದ್ಯಂತ ಅಪನಂಬಿಕೆ ಮೂಡುವಂತಾಗಿದೆ. ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಜಯಂತ್ ಟಿ. ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ ಅವರು, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.

ಸೌಜನ್ಯ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬುದೇ ನಮ್ಮ ಆಶಯ. ಆದರೆ ನ್ಯಾಯದ ಹೋರಾಟದ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಗ್ರಾಮಸ್ಥರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶ್ರೀನಿವಾಸ್ ರಾವ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular