ಬೆಳಗಾವಿ : ಪತ್ರಕರ್ತರ ಸೋಗಿನಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್‌ಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಗಳು ತಾವೇ ಗಾಂಜಾ ನೀಡಿ, ಬಳಿಕ ಪೊಲೀಸರ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರು ಹುಕ್ಕೇರಿಯ ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ ಹಾಗೂ ಡೇವಿಡ್ ತಂಗೇರಾಳ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಕೊಟಬಾಗಿ ಗ್ರಾಮದ ಮೆಹಬೂಬ್ ಜಮಾದಾರ್ ಅವರಿಗೆ ಆರೋಪಿಗಳು ಗಾಂಜಾ ಪಾಕೆಟ್ ನೀಡಿ, ಅದನ್ನೇ ಆಧಾರವಾಗಿಸಿಕೊಂಡು “ಗಾಂಜಾ ಮಾರಾಟ ಮಾಡುತ್ತಿದ್ದೀಯ” ಎಂದು ಆರೋಪಿಸಿ ವಿಡಿಯೊ ಚಿತ್ರೀಕರಿಸಿದ್ದಾರೆ. ಬಳಿಕ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮೆಹಬೂಬ್ ಅವರಿಂದ ₹60 ಸಾವಿರ ಪಡೆದು, ಉಳಿದ ಹಣ ನೀಡದ ಹಿನ್ನೆಲೆಯಲ್ಲಿ ಚಿತ್ರೀಕರಿಸಿದ ವಿಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದಾಗಿ ಆರೋಪಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಹುಕ್ಕೇರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯೂಟ್ಯೂಬ್ ಮತ್ತು ಪತ್ರಕರ್ತರ ಹೆಸರನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತಿದ್ದ ಸುಲಿಗೆ ಜಾಲವನ್ನು ಭೇದಿಸಿರುವ ಹುಕ್ಕೇರಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


