Tuesday, May 12, 2026
Flats for sale
Homeರಾಜ್ಯಬೆಂಗಳೂರು : ಹೊಸ ಅಬಕಾರಿ ನೀತಿ ಜಾರಿಯಿಂದ ರಾಜ್ಯದಲ್ಲಿ ಮದ್ಯ ಮತ್ತಷ್ಟು ದುಬಾರಿ – ಮದ್ಯಪಾನಿಗಳಿಗೆ...

ಬೆಂಗಳೂರು : ಹೊಸ ಅಬಕಾರಿ ನೀತಿ ಜಾರಿಯಿಂದ ರಾಜ್ಯದಲ್ಲಿ ಮದ್ಯ ಮತ್ತಷ್ಟು ದುಬಾರಿ – ಮದ್ಯಪಾನಿಗಳಿಗೆ ಶಾಕ್.

ಬೆಂಗಳೂರು : ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿ, “ಆಲ್ಕೋಹಾಲ್ ಇನ್ ಬೇವರೇಜ್” ಆಧಾರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದೆ. ಸೋಮವಾರದಿಂದ ಈ ಹೊಸ ನೀತಿ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಈ ಮೂಲಕ ಕಳೆದ ಆರು ದಶಕಗಳಿಂದ ಜಾರಿಯಲ್ಲಿದ್ದ “ಬಲ್ಕ್ ಲೀಟರ್” ಆಧಾರಿತ ತೆರಿಗೆ ವ್ಯವಸ್ಥೆಗೆ ತೆರೆ ಬಿದ್ದಿದೆ. ಸ್ಲ್ಯಾಬ್ ಆಧಾರಿತ ಈ ಹೊಸ ತೆರಿಗೆ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.

ಹೊಸ ನೀತಿಯ ಪರಿಣಾಮವಾಗಿ ಕಡಿಮೆ ಮತ್ತು ಮಧ್ಯಮ ದರದ ಮದ್ಯಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವಿಶೇಷವಾಗಿ 180 ಮಿಲಿ ಟೆಟ್ರಾ ಪ್ಯಾಕ್‌ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಹಾಗೂ ವೋಡ್ಕಾ ದರವು ಕನಿಷ್ಠ 20%ರವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.ಇದೀಗಲೇ ಕರ್ನಾಟಕದಲ್ಲಿ ಮದ್ಯದ ಬೆಲೆ ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿರುವ ಹಿನ್ನೆಲೆ, ಹೊಸ ನೀತಿ ಮದ್ಯಪ್ರಿಯರಿಗೆ ಮತ್ತಷ್ಟು ಹೊರೆ ತರಲಿದೆ.

ಇನ್ನೊಂದೆಡೆ, ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್ ಮದ್ಯಗಳ ಬೆಲೆಯಲ್ಲಿ 16% ರಿಂದ 20%ರವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗಬಹುದು ಎಂದು ಉದ್ಯಮ ವಲಯ ಹೇಳಿದೆ. ಹೊಸ ನಿಯಮದ ಪ್ರಕಾರ, ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್ ಹಾಗೂ ವೈನ್ ಸೇರಿದಂತೆ ಮದ್ಯಪಾನಗಳಲ್ಲಿ ಇರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಸ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಹೊಸ ನೀತಿಯಿಂದ ಕಡಿಮೆ ಬೆಲೆಯ ಭಾರತೀಯ ಮದ್ಯ ಉತ್ಪಾದಕರಿಗೆ ಹೊರೆ ಹೆಚ್ಚಾಗಬಹುದು ಎಂದು ಸ್ಥಳೀಯ ಡಿಸ್ಟಿಲರಿಗಳು ಆತಂಕ ವ್ಯಕ್ತಪಡಿಸಿವೆ. ಸ್ಥಳೀಯ ಹೂಡಿಕೆ ಹಾಗೂ ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮ ವಲಯ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular