ಬೆಂಗಳೂರು : ಗೋಲ್ಗುಂಬಜ್ ರೈಲಿನಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಗೋಲ್ಗುAಬಜ್ ರೈಲಿನಲ್ಲಿ ಕಸ್ತೂರಬಾ ನಗರ ನಿವಾಸಿಗಳಾದ ಮುನಿರಾಜು (24) ಮೊಹಮದ್ ಇರ್ಫಾನ್ (19), ದರ್ಶನ್(21), ಮಹ್ಮದ್ ಇಮ್ರಾನ್ (20), ಮೋಹಿನ್ ಪಾಷಾ (21), ಜೆ.ಜೆ.ನಗರದ ಫೈಸಲ್ಖಾನ್ (22) ಬಂಧಿತ ಆರೋಪಿಗಳು. ಘಟನೆ ನಡೆದು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರೈಲಿನಲ್ಲಿ ಕರ್ತವ್ಯನಿರತ ಮೈಸೂರು ರೈಲ್ವೆ ಪೊಲೀಸ್ ಸತೀಶ್ಚಂದ್ರ ಅವರನ್ನು ಆರೋಪಿಗಳು ಚಾಕುವಿನಿಂದ ಇರಿದಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ರೈಲಿನಲ್ಲಿ ಕಳ್ಳತನ ಪ್ರಕರಣಗಳ ಪತ್ತೆ, ತಡೆಗಟ್ಟುವ ಕರ್ತವ್ಯಕ್ಕೆ ಸತೀಶ್ಚಂದ್ರನನ್ನು ನಿಯೋಜಿಸಲಾಗಿತ್ತು. ರೈಲಿನ `ಎಸ್’ ಬೋಗಿಯ ಶೌಚಾಲಯದ ಎದುರು ಆರು ಜನ ಗುಂಪು ಇತ್ತು. ಇಬ್ಬರು ಆರೋಪಿಗಳು ರೈಲು ಬೋಗಿಯ ಬಳಿ ಸಿಗರೇಟ್ ಸೇದುತ್ತಿದ್ದರು. ಉಳಿದ ನಾಲ್ವರು ಬಾಗಿಲ ಬಳಿ ಕುಳಿತು ಅಭ್ಯವಾಗಿ ವರ್ತಿಸಿದ್ದರು. ಆಗ ಪೊಲೀಸ್ ಬುದ್ಧಿಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಗುಂಪು ಪೊಲೀಸ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.


