ಬೀಜಿಂಗ್ : ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಸರ್ಕಾರ ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ಈ ವಿಚಾರವನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಬೇಕು ಎಂದು ಚೀನಾ ಮತ್ತೆ ಪ್ರತಿಪಾದಿಸಿದ್ದು, ಪಾಕಿಸ್ತಾನದ ನಿಲುವಿಗೆ ಬೆಂಬಲ ಸೂಚಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಚೀನಾ ಭೇಟಿಯ ವೇಳೆ ಹೊರಬಿದ್ದ ಜಂಟಿ ಹೇಳಿಕೆಯಲ್ಲಿ, ವಿಶ್ವಸಂಸ್ಥೆಯ ಸನದು, ಭದ್ರತಾ ಮಂಡಳಿಯ ನಿರ್ಣಯಗಳು ಹಾಗೂ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಚೀನಾ ಅಭಿಪ್ರಾಯಪಟ್ಟಿದೆ.
ಚೀನಾದ ಈ ನಿಲುವು ಉಭಯ ದೇಶಗಳ ಪ್ರಾದೇಶಿಕ ಭದ್ರತೆ, ಆರ್ಥಿಕ ಸಹಕಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಭಾಗವಾಗಿ ಪರಿಗಣಿಸಲಾಗುತ್ತಿದೆ. 1947-48ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ವಿಶ್ವಸಂಸ್ಥೆ ರೂಪಿಸಿದ್ದ ನಿರ್ಣಯಗಳ ಆಧಾರದಲ್ಲಿ ಮತ್ತೆ ಚರ್ಚೆ ಆರಂಭಿಸುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿಶ್ವಸಂಸ್ಥೆಯ ನಿರ್ಣಯಗಳನ್ನು ಪದೇ ಪದೇ ಉಲ್ಲೇಖಿಸುತ್ತಿದ್ದರೂ, ಭದ್ರತಾ ಮಂಡಳಿ ವಿಧಿಸಿದ್ದ ಷರತ್ತುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ ಎಂಬುದು ಗಮನಾರ್ಹವಾಗಿದೆ. ಭಾರತ ಮಾತ್ರ ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ಯಾವುದೇ ಮೂರನೇ ಪಕ್ಷದ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂಬ ನಿಲುವನ್ನು ನಿರಂತರವಾಗಿ ಪುನರುಚ್ಚರಿಸುತ್ತಿದೆ.


