Tuesday, August 25, 2026
Homeಜಿಲ್ಲೆಪುತ್ತೂರು : ಬಂದ್‌ಗೆ ಉತ್ತಮ ಪ್ರತಿಕ್ರಿಯೆ ; ಬಂದ್ ನಡುವೆಯೂ ಶಾಂತಿಯುತವಾಗಿ ಸಾಗಿದ ಈದ್ ಮಿಲಾದ್...

ಪುತ್ತೂರು : ಬಂದ್‌ಗೆ ಉತ್ತಮ ಪ್ರತಿಕ್ರಿಯೆ ; ಬಂದ್ ನಡುವೆಯೂ ಶಾಂತಿಯುತವಾಗಿ ಸಾಗಿದ ಈದ್ ಮಿಲಾದ್ ಮೆರವಣಿಗೆ.

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ವರ್ತಕರ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಹಾಗೂ ಪೊಲೀಸ್ ವೈಫಲ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಪುತ್ತೂರು ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಲ್ಲೆ ಪ್ರಕರಣವನ್ನು ಖಂಡಿಸಿ ಇಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗುತ್ತಿದೆ. ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಹಲವು ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಗ್ರಾಹಕರ ಸೇವೆಗಾಗಿ ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ತೆರೆದಿರುವುದು ಕಂಡುಬಂದಿದೆ.

ಆಟೋ ಸಂಚಾರವೂ ಕಡಿಮೆ ಬಂದ್‌ಗೆ ಬಿಎಂಎಸ್ ಆಟೋ ಯೂನಿಯನ್ ಸೇರಿದಂತೆ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಪರಿಣಾಮವಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾನ್ಯ ದಿನಗಳಿಗಿಂತ ಆಟೋಗಳ ಸಂಚಾರ ಕಡಿಮೆಯಾಗಿದೆ. ಬಂದ್‌ಗೆ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಬೆಂಬಲವೂ ವ್ಯಕ್ತವಾಗಿದೆ.

ಈದ್ ಮಿಲಾದ್ ಮೆರವಣಿಗೆ ಶಾಂತಿಯುತ ಇದೇ ವೇಳೆ ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈದ್ ಮಿಲಾದ್ ಹಬ್ಬದ ಸಂಭ್ರಮ ನಡೆಯುತ್ತಿದೆ. ಪುತ್ತೂರಿನ ಬಪ್ಪಳಿಗೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆ ಆಯೋಜಿಸಲಾಗಿತ್ತು. ಪುತ್ತೂರು ಬಂದ್ ನಡೆಯುತ್ತಿದ್ದ ನಡುವೆಯೇ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ಸಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಮೆರವಣಿಗೆ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಲ್ಲೂ ಈದ್ ಮಿಲಾದ್ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯುತ್ತಿವೆ. ಬಂದ್ ಹಾಗೂ ಈದ್ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಪುತ್ತೂರು ನಗರದಲ್ಲಿ ಬಂದ್ ಮತ್ತು ಈದ್ ಮಿಲಾದ್ ಒಂದೇ ದಿನ ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ನಗರದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಭದ್ರತೆ
▪️ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ – 01
▪️ ಡಿವೈಎಸ್‌ಪಿ – 01
▪️ ಪಿಎಸ್‌ಐ – 08
▪️ ಎಎಸ್‌ಐ – 10
▪️ ಪೊಲೀಸ್ ಸಿಬ್ಬಂದಿ – 50
▪️ ಕೆಎಸ್‌ಆರ್‌ಪಿ – 05 ತುಕಡಿ
▪️ ಡಿಎಆರ್ – 03 ತುಕಡಿ
▪️ ಸ್ಪೆಷಲ್ ಆಕ್ಷನ್ ಫೋರ್ಸ್ (SAF) – 01 ತುಕಡಿ

ಸರ್ಕಾರಿ ಬಸ್‌ಗಳು ಎಂದಿನಂತೆ ಸಂಚಾರ ಬಂದ್ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದ್ದರೂ, ಸರ್ಕಾರಿ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ.

ಒಟ್ಟಿನಲ್ಲಿ ಪುತ್ತೂರು ನಗರದಲ್ಲಿ ಬಂದ್ ಹಾಗೂ ಈದ್ ಮಿಲಾದ್ ಕಾರ್ಯಕ್ರಮಗಳು ಒಂದೇ ದಿನ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಕೈಗೊಂಡಿದ್ದು, ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular