ನವದೆಹಲಿ : ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಬುಧವಾರ ಕರ್ನಾಟಕ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸೌಜನ್ಯ ತಾಯಿ ಕುಸುಮಾವತಿ ಪರ ವಕೀಲರು, ಪ್ರಕರಣದ ಕೆಲವು ಸಾಕ್ಷಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಸಾಕ್ಷಿಗಳಿಗೆ ತಕ್ಷಣ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದೇ ವೇಳೆ, ರಾಜ್ಯ ಸರ್ಕಾರ ಹಾಗೂ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಜುಲೈ 14ರೊಳಗೆ ಕೌಂಟರ್ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರ ಮತ್ತು ಸಿಬಿಐ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರಿರದಿರುವುದನ್ನು ಕೋರ್ಟ್ ಗಮನಿಸಿದೆ. ಮಧ್ಯಾಹ್ನದ ವಿಚಾರಣೆಯಲ್ಲೂ ತಮ್ಮ ನಿಲುವು ಸ್ಪಷ್ಟಪಡಿಸದ ಹಿನ್ನೆಲೆಯಲ್ಲಿ, ಎರಡು ವಾರಗಳೊಳಗೆ ಮರುತನಿಖೆಯನ್ನು ಯಾವ ಸಂಸ್ಥೆ ನಡೆಸಬೇಕು ಎಂಬುದನ್ನು ತಿಳಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲರು ಪ್ರಮುಖ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಮನಗಂಡ ನ್ಯಾಯಾಲಯವು ಸಾಕ್ಷಿಗಳ ಭದ್ರತೆಯನ್ನು ಖಚಿತಪಡಿಸಲು ಒತ್ತಾಯಿಸಿದೆ.


