ಹೊಸದಿಲ್ಲಿ : ಭಾರತೀಯ ವನಿತಾ ಕ್ರಿಕೆಟ್ ತಂಡದ ದೀರ್ಘಾವಧಿಯ ಹಾಗೂ ಯಶಸ್ವಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಎಲ್ಲ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಅವರು ಈ ದಿಢೀರ್ ನಿರ್ಧಾರ ಪ್ರಕಟಿಸಿದ್ದು, ಭಾರತೀಯ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.
‘ನಾಯಕತ್ವ ಮುಗಿದಿದೆ, ಪಯಣ ಮುಂದುವರಿಯಲಿದೆ’.
37 ವರ್ಷದ ಹರ್ಮನ್ಪ್ರೀತ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿ, “ನಾಯಕತ್ವ ಮುಗಿದಿದೆ. ಆದರೆ ಪಯಣ ಮುಂದುವರಿಯಲಿದೆ. ನಾಯಕಿಯಾಗಿ ನನ್ನ ಕೆಲಸವನ್ನು ಪೂರ್ತಿಗೊಳಿಸಿದ್ದೇನೆ. ಮತ್ತೆ ಆಟವನ್ನು ಪ್ರೀತಿಯಿಂದ ಆಡುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ ನಿರ್ಧಾರ
ಕಳೆದ ಕೆಲವು ತಿಂಗಳ ವನಿತಾ ತಂಡದ ಪ್ರದರ್ಶನದ ಮೌಲ್ಯಮಾಪನಕ್ಕಾಗಿ ಗುವಾಹಟಿಯಲ್ಲಿ ನಡೆದ ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ ಕೌರ್ ರಾಜೀನಾಮೆ ಘೋಷಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಹಾಗೂ ಕೋಚ್ ಅಮೋಲ್ ಮುಜುಮ್ದಾರ್ ಭಾಗವಹಿಸಿದ್ದರು.
‘ನನ್ನ ಕರ್ತವ್ಯ ನಿರ್ವಹಿಸಿದ್ದೇನೆ’.
ತಮ್ಮ ನಿರ್ಧಾರದ ಕುರಿತು ಕೌರ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಸುದೀರ್ಘ ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಹಾಗೂ ತಂಡಕ್ಕಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿರುವ ಅವರು, “ಈ ತಂಡಕ್ಕಾಗಿ ನಾನು ಸರ್ವಸ್ವವನ್ನೂ ನೀಡಿದ್ದೇನೆ. ಅತ್ಯಂತ ಹೆಮ್ಮೆಯಿಂದ ಈ ಜವಾಬ್ದಾರಿಯನ್ನು ಹೊತ್ತಿದ್ದೆ” ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ವೈಫಲ್ಯದ ಬಳಿಕ ಟೀಕೆ.
ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ಗೂ ಅರ್ಹತೆ ಪಡೆಯಲು ವಿಫಲವಾದ ಬಳಿಕ ಕೌರ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಮಾಜಿ ಆಟಗಾರ್ತಿಯರೂ ನಾಯಕತ್ವ ಬದಲಾವಣೆಯ ಪರವಾಗಿ ಧ್ವನಿ ಎತ್ತಿದ್ದರು.
2016ರಲ್ಲಿ ನಾಯಕತ್ವದ ಆರಂಭ 2016ರಲ್ಲಿ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಕೌರ್, 2022ರಲ್ಲಿ ಏಕದಿನ ಹಾಗೂ ಟೆಸ್ಟ್ ತಂಡಗಳಿಗೂ ನಾಯಕಿಯಾಗಿ ಆಯ್ಕೆಯಾಗಿದ್ದರು.
ಕೌರ್ರ ಪ್ರಮುಖ ಸಾಧನೆಗಳು.
150ಕ್ಕೂ ಅಧಿಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಶ್ವದ ಏಕೈಕ ನಾಯಕಿ.
ಭಾರತಕ್ಕೆ 4 ಏಷ್ಯಾ ಕಪ್ ಗೆದ್ದುಕೊಟ್ಟ ನಾಯಕಿ.
2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ.
ಏಷ್ಯಾಡ್ನಲ್ಲಿ ಸತತ 2 ಚಿನ್ನದ ಪದಕ ಗೆಲುವಿನಲ್ಲಿ ನಾಯಕತ್ವ.
ಕಳೆದ ವರ್ಷ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕಿ.
5 ಟೆಸ್ಟ್, 51 ಏಕದಿನ ಹಾಗೂ 155 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
ಕ್ರಮವಾಗಿ 4, 33 ಹಾಗೂ 94 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದೆ.
ಇದೇ ವರ್ಷ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಮೊದಲ ಟೆಸ್ಟ್ ಗೆಲುವಿಗೂ ನಾಯಕತ್ವ.
ಮಂಧನಾ ನೂತನ ನಾಯಕಿ.
ಹರ್ಮನ್ಪ್ರೀತ್ ಕೌರ್ ಬಳಿಕ ಸ್ಮೃತಿ ಮಂಧನಾ ಅವರನ್ನು ಭಾರತ ಮಹಿಳಾ ತಂಡದ ನೂತನ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಅವರು ಇನ್ನು ಮುಂದೆ ಟೆಸ್ಟ್, ಏಕದಿನ ಹಾಗೂ ಟಿ20—ಎಲ್ಲ ಮೂರು ಮಾದರಿಗಳಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶಫಾಲಿ ವರ್ಮಾ, ಏಕದಿನ ಸರಣಿಗೆ ದೀಪ್ತಿ ಶರ್ಮಾ ಉಪನಾಯಕಿಯರಾಗಿ ನೇಮಕಗೊಂಡಿದ್ದಾರೆ.
“ನೋವುಂಟು ಮಾಡಿದ ಸನ್ನಿವೇಶ, ಟೀಕೆ, ಸಂದೇಹ, ಅವಮಾನ ಎಲ್ಲವನ್ನೂ ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿದ್ದೇನೆ. ಗೆಲುವು, ಸಂಭ್ರಮಾಚರಣೆ ಹಾಗೂ ದೇಶದ ಖುಷಿ—ಇವೆಲ್ಲ ತ್ಯಾಗಕ್ಕೆ ಸಾರ್ಥಕ್ಯ ತಂದ ಕ್ಷಣಗಳು” ಎಂದು ಕೌರ್ ಹೇಳಿದ್ದಾರೆ.

