ದುಬೈ : ಫ್ಲೈದುಬೈ ವಿಮಾನದಲ್ಲಿ ಕಾಕ್ಪಿಟ್ ನಿಯಂತ್ರಣ ಪಡೆಯಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಒಮಾನ್ ಮೂಲದ ಸಹ-ಪೈಲಟ್ ಹಮ್ಮಾಮಿ, ತನಿಖೆಯ ವೇಳೆ “ವಿಮಾನ ಪತನವಾಗಬೇಕೆಂದು ಬಯಸಿದ್ದೆ” ಎಂದು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ತನಿಖಾಧಿಕಾರಿಗಳ ಮುಂದೆ “ನನಗೆ ಯಾವುದೇ ರೀತಿಯಲ್ಲೂ ಸಾವಿನ ಭಯ ಇರಲಿಲ್ಲ” ಎಂದು ಹಮ್ಮಾಮಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಸೌದಿ ಅರೇಬಿಯಾ ಅಧಿಕಾರಿಗಳ ವಶದಲ್ಲಿದ್ದ ಆತನನ್ನು ಯುಎಇಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ ಎನ್ನಲಾಗಿದೆ.
ಕಾಕ್ಪಿಟ್ನಲ್ಲಿ ಹಲ್ಲೆ ಆರೋಪ 180ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನದಲ್ಲಿ ಹಮ್ಮಾಮಿ ಕಾಕ್ಪಿಟ್ನಲ್ಲಿದ್ದ ತುರ್ತು ಕೊಡಲಿಯನ್ನು ಬಳಸಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಹಲ್ಲೆ ನಡೆಸಿ, ಕಾಕ್ಪಿಟ್ನ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚರ್ ದಿಟ್ಟತನದಿಂದ ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ ಹಮ್ಮಾಮಿಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳ ಪರಿಶೀಲನೆ ಇದೀಗ ತನಿಖಾಧಿಕಾರಿಗಳು ಹಮ್ಮಾಮಿಯ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಪರಿಶೀಲಿಸುತ್ತಿದ್ದಾರೆ.
ಮಹಿಳೆಯರು ಉದ್ಯೋಗ ಮಾಡುವುದನ್ನು ವಿರೋಧಿಸುವ ರೀತಿಯ ಪೋಸ್ಟ್ಗಳನ್ನು ಆತ ಮಾಡಿದ್ದ ಎನ್ನಲಾಗಿದೆ. ಮದುವೆಯಾಗುವ ಮಹಿಳೆ ಮನೆಯಲ್ಲೇ ಇರಬೇಕು ಎಂಬ ಅಭಿಪ್ರಾಯವನ್ನೂ ಆತ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದ ಎಂದು ವರದಿಗಳು ಹೇಳಿವೆ. ಆತ ಬಳಿಕ ಕೆಲವು ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದು, ಅವುಗಳನ್ನು ಮರುಪಡೆಯುವ ಮೂಲಕ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ಪ್ರಕರಣವನ್ನು ಯುಎಇ ಅಟಾರ್ನಿ ಜನರಲ್ ‘ಉಗ್ರ ಕೃತ್ಯ’ ಎಂದು ಅಧಿಕೃತವಾಗಿ ಪರಿಗಣಿಸಿರುವುದಾಗಿ ವರದಿಯಾಗಿದ್ದು, ಘಟನೆಯ ಹಿಂದಿನ ಉದ್ದೇಶ ಹಾಗೂ ಹಮ್ಮಾಮಿಯ ಚಟುವಟಿಕೆಗಳ ಕುರಿತು ತನಿಖೆ ಮುಂದುವರಿದಿದೆ.

