ತುಮಕೂರು : ಜಮೀನು ವಿವಾದ ಹಿನ್ನೆಲೆ ಸಂಬಂಧಿಕರೇ ತಂದೆ ಮತ್ತು ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಯತ್ನ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಉಪ್ಪಿನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಕಲಾವತಿ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಲಿಂಗಯ್ಯ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತವರು ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಲಿಂಗಯ್ಯ ಮತ್ತು ಕಲಾವತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆಯಲ್ಲಿ ತೀರ್ಪು ಅವರ ಪರವಾಗುತ್ತಿದ್ದ ಹಿನ್ನೆಲೆ ಕುಪಿತಗೊಂಡ ಸಂಬಂಧಿಕರು ಟ್ರ್ಯಾಕ್ಟರ್ ಹರಿಸಿ ಕೊಲೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಕಲ್ಲೇಶ, ಮಂಜುನಾಥ, ನಾಗರಾಜು, ಪುಷ್ಟಾವತಿ, ಭಾಗ್ಯಮ್ಮ ಹಾಗೂ ರಶ್ಮಿ ವಿರುದ್ಧ ಆರೋಪ ಕೇಳಿಬಂದಿದೆ.ಕಳೆದ ಶುಕ್ರವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


