ಗದಗ : ಅಕ್ರಮ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತ ಕುಟುಂಬವೊಂದು ಮನೆ ತೊರೆಯುವಂತಾದ ಘಟನೆ ಗದಗ ನಗರದ ಮಾಂಡ್ರೆ ಲೇಔಟ್ನಲ್ಲಿ ಬೆಳಕಿಗೆ ಬಂದಿದೆ. ಬಡ್ಡಿ ಹಣ ಪಾವತಿಯಲ್ಲಿ ವಿಳಂಬವಾದ ಕಾರಣ ಜೆಸಿಬಿ ಮೂಲಕ ಮನೆ ಕಂಪೌಂಡ್ ಧ್ವಂಸಗೊಳಿಸಿ, ಮನೆಯಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿರುವ ಆರೋಪ ಕೇಳಿಬಂದಿದೆ.

ಕೋಟೇಶ್ ನಿಂಗಪ್ಪ ಬಾಗಲಿ ಎಂಬುವರ ಮನೆಗೆ ನುಗ್ಗಿದ ಆರೋಪಿಗಳು ಕಂಪೌಂಡ್, ಟಿವಿ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮನೆಯ ಕೈತೋಟವನ್ನು ಧ್ವಂಸಗೊಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಬಳಿಕ ಕುಟುಂಬ ಭಯಭೀತಗೊಂಡಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿರುವುದಾಗಿ ತಿಳಿದುಬಂದಿದೆ.
ಕೋಟೇಶ್ ಅವರು 10 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಅದಕ್ಕೆ 20 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ದರ್ಶನ ಕೋರಸ್, ಜೀವನ್ ಮುತಗಾರ್ ಹಾಗೂ ಶ್ರೀಕಾಂತ್ ಕೋರಸ್ ಎಂಬುವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸಿ ಮನೆ ಬರೆದುಕೊಡುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕೋಟೇಶ್ ಅವರ ಪತ್ನಿಗೆ ಚಾಕು ತೋರಿಸಿ ಖಾಲಿ ಚೆಕ್ಗೆ ಸಹಿ ಮಾಡಿಸಿಕೊಂಡಿರುವುದಾಗಿ ಹಾಗೂ ಹಿರಿಯ ಮಗನನ್ನು ಅಪಹರಿಸಲು ಯತ್ನಿಸಿರುವುದಾಗಿ ಕೂಡ ಆರೋಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ರೀತಿಯ ಕಿರುಕುಳ ಮುಂದುವರಿದಿದೆ ಎಂದು ಕುಟುಂಬ ಆರೋಪಿಸಿದೆ.
ಪ್ರಕರಣ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನಿನ ಭಯವಿಲ್ಲದೆ ವಾರದ, ಪಾಕ್ಷಿಕ ಹಾಗೂ ಮಾಸಿಕ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

