ಕಲಬುರಗಿ : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಭೀಕರ ಸ್ಫೋಟಕ್ಕೆ ಬಲಿಯಾಗಿದ್ದಾನೆ.
ಮೃತ ಬಾಲಕನನ್ನು ಭೀಮರಾಯ (15) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಕಾಡುಹಂದಿಗಳನ್ನು ಓಡಿಸುವ ಉದ್ದೇಶದಿಂದ ಬಾಲಕನ ತಂದೆ ಮನೆಯಲ್ಲಿ ಸ್ಫೋಟಕ ಮದ್ದನ್ನು ತಂದು ಸಂಗ್ರಹಿಸಿಟ್ಟಿದ್ದರು. ಈ ಮದ್ದನ್ನು ದೀಪಾವಳಿ ಪಟಾಕಿ ಎಂದು ಭಾವಿಸಿದ ಭೀಮರಾಯ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಬಾಲಕ ಬೆಂಕಿ ಹಚ್ಚಿದ ಕ್ಷಣಾರ್ಧದಲ್ಲೇ ಮದ್ದು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕನ ಮುಖ ಹಾಗೂ ತಲೆಗೆ ತೀವ್ರ ಹಾನಿಯಾಗಿದ್ದು, ಆತ ದಾರುಣವಾಗಿ ಮೃತಪಟ್ಟಿದ್ದಾನೆ.
ಘಟನೆಯಿಂದ ಹಂದರಕಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ಕುರಿತು ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಕ್ಕಳು ಅಪರಿಚಿತ ವಸ್ತುಗಳನ್ನು ಪಟಾಕಿ ಎಂದು ಭಾವಿಸಿ ಮುಟ್ಟದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಸ್ಫೋಟಕ ವಸ್ತುಗಳನ್ನು ಮಕ್ಕಳ ಕೈಗೆಟುಕದ ಸುರಕ್ಷಿತ ಸ್ಥಳದಲ್ಲಿ ಇರಿಸುವುದು ಅತ್ಯಗತ್ಯ.

