ಕಡಬ : ಅಕ್ರಮವಾಗಿ ಗೋವಧೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಮೇ 29ರಂದು ಸಂಜೆ ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ನೇತೃತ್ವದ ತಂಡ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಪ್ರದೇಶಕ್ಕೆ ದಾಳಿ ನಡೆಸಿತು. ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ತಯಾರಿಸಲಾಗುತ್ತಿದ್ದುದು ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಬಂಧಿತರನ್ನು ಕೆ. ಅಬ್ದುಲ್ ರಫೀಕ್ (37), ಅದ್ರಾಮ ಮಂತೂರು (41) ಮತ್ತು ಅಬ್ದುಲ್ ಖಾದರ್ ಪಣೆಮಜಲು (57) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿರುವುದು ಕಂಡುಬಂದಿದೆ ಎಂದು ತಿಳಿಸಲಾಗಿದೆ.
ಸ್ಥಳದಲ್ಲಿದ್ದ ಜಾನುವಾರು ಮಾಂಸ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 36/2026 ದಾಖಲಿಸಲಾಗಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2023ರ ಕಲಂ 4, 7 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


