ಉಳ್ಳಾಲ ; ಹಿರಿಯರ ಮಾರ್ಗದರ್ಶನ, ಸೌಹಾರ್ದತೆಯ ವಾತಾವರಣದಿಂದ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ರೂ.55 ಲಕ್ಷ ರೂಪಾಯಿ ಶಾಸಕರ ನಿಧಿಯ ಅನುದಾನದಲ್ಲಿ ನಾಟೆಕಲ್ ಮುಖ್ಯ ರಸ್ತೆಯಿಂದ ಕಿನ್ಯಾ ಬೆಳರಿಂಗೆ ಆಗಿ ರೆಹಮತ್ ನಗರಕ್ಕೆ ಸಂಪರ್ಕಿಸುವ ರಸ್ತೆ ಅಗಲೀಕರಣ ಹಾಗೂ ಮರು ಡಾಮರೀಕರಣ ಕಾಮಗಾರಿಗಳಿಗೆ ಹಾಗೂ ಸಂಕೇಶ 1ನೇ ಅಡ್ಡರಸ್ತೆ ಕಾಂಕ್ರಿಟೀಕರಣಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಕಿನ್ಯಾ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಅಗಲಿದ ಹಸನ್ ಕುಂಞ ಹಾಜಿ, ಸಾಧು ಕುಂಞ ಮಾಸ್ಟರ್ ರಂತಹ ಹಿರಿಯರ ಕೊಡುಗೆ ಬಹಳಷ್ಟಿದೆ. ಅವರ ಮಾರ್ಗದರ್ಶನಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ರೆಹಮತ್ ನಗರ ರಸ್ತೆಯನ್ನು ಎರಡೂ ಬದಿಯಲ್ಲೂ 1 ಫೀಟ್ ಅಗಲೀಕರಣಗೊಳಿಸಿ ಮರುಡಾಮರೀಕರಣ ನಡೆಸಲಾಗುವುದು. ಗ್ರಾಮದ ಸರಕಾರಿ ಶಾಲೆಗೆ ಈಗಾಗಲೇ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಮಸ್ಯೆ ಬಗೆಹರಿಯಬೇಕಾದಲ್ಲಿ ನಾಲ್ಕು ಕೊಠಡಿಗಳ ಅಗತ್ಯವಿದೆ. ಈ ಕುರಿತು ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದೆ. ಬಾಕಿ ಉಳಿದ ಪಾಲಾಡಿ, ಸಂಕೇಶ 3 ನೇ ಅಡ್ಡ ರಸ್ತೆ , ಮಸೀದಿ ರಸ್ತೆ, ಕೋಡಿ ಮತ್ತು ದೊಡ್ಡ ಯೋಜನೆಯಾಗಿರುವ ಮಲ್ಲಪಡ್ಪು ರಸ್ತೆಯ ಅಭಿವೃದ್ಧಿಯನ್ನು ಮುಂದಿನ ದಿನಗಳಲ್ಲಿ ನೆರವೇರಿಸಲಾಗುವುದು. ಗ್ರಾಮದಲ್ಲಿ ದೇವಸ್ಥಾನ, ದೈವಸ್ಥಾನ , ಜುಮಾ ಮಸೀದಿಗಳ ನಡುವೆ ಭಾವನಾತ್ಮಕ ಸಂಬಂಧಗಳು ಇದ್ದು, ಇದು ಗ್ರಾಮದ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭ ಕಿನ್ಯಾ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರುಗಳಾದ ಸಿರಾಜುದ್ದೀನ್ ಕಿನ್ಯಾ,ಕಿನ್ಯಾ ಗ್ರಾ.ಪಂ ಮಾಜಿ ಅಧ್ಯಕ್ಷ ಹಮೀದ್ ಕಿನ್ಯಾ ಮೊದಲಾದವರು ಉಪಸ್ಥಿತರಿದ್ದರು.