ಉಳ್ಳಾಲ: ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ ನಡೆದಿದ್ದು ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನ ನಸುಕಿನ ವೇಳೆ ಇಬ್ಬರು ಐನಾತಿ ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರಿನ ಸಾರ್ವಜನಿಕ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಸ್ಥಳೀಯ ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಕಳವು ಮಾಡಲಾಗಿದೆ.ಮಂಗಳವಾರ ಮುಂಜಾನೆ ನಸುಕಿನ 1.42 ರ ವೇಳೆ ಇಬ್ಬರು ಐನಾತಿ ಕಳ್ಳರು ಬೈಕನ್ನ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ತೊಕ್ಕೊಟ್ಟಿನ ಹಳೆಯ ಬೈಕ್ ಮಾರಾಟದ ಶೋರೂಮಲ್ಲೂ ಬೈಕ್ ಕಳವಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಳೆದ ಶನಿವಾರ ನರಿಂಗಾನದಲ್ಲಿ ನಡೆಯುತ್ತಿದ್ದ ಕಂಬಳ ಉತ್ಸವದಲ್ಲೂ ವ್ಯಕ್ತಿಯೋರ್ವರ ಬೈಕ್ ಕಳವಾಗಿದೆಯಂತೆ,ಕಂಬಳ ಉತ್ಸವದಲ್ಲಿ ಸಾವಿರಾರು ವಾಹನ ಜಮಾಯಿಸಿದ್ದರಿಂದ ಎಲ್ಲೊ ಬೈಕ್ ಮಿಸ್ ಆಗಿರಬಹುದೆಂದು ಕೊಣಾಜೆ ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ.
ತಲವಾರು ಜಳಪಿಸಿ ಬೈಕ್ ದೋಚುತ್ತಾರೆ
ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿಯ ಉದ್ಯಮಿಯೋರ್ವರ ಮನೆಯಿಂದ ಐದು ವರುಷದ ಹಿಂದೆನೆ ಬುಲೆಟ್ ಒಂದನ್ನ ಕಳ್ಳರು ಎಗರಿಸಿದ್ದರು.ನಂತರ ಮಡಿಕೇರಿಯಲ್ಲಿ ನಂಬರ್ ಪ್ಲೇಟ್ ಬದಲಿಸಿ ತಿರುಗುತ್ತಿದ್ದ ಅದೇ ಬುಲೆಟ್ ಪತ್ತೆಯಾಗಿತ್ತು.ಎರಡು ವರುಷದ ಹಿಂದೆ ಮತ್ತೆ ಅವರದೇ ಮನೆಯಿಂದ ಬೈಕೊಂದನ್ನ ಕದ್ದು ರಸ್ತೆಯಲ್ಲಿ ಇರಿಸಲಾಗಿತ್ತು,ಇದೇ ಸಂದರ್ಭ ಸಮೀಪದ ಕೊಲ್ಯದ ಮನೆಯೊಂದರಿಂದಲೂ ಬುಲೆಟ್ ಒಂದನ್ನ ಕದ್ದು ರಸ್ತೆಯಲ್ಲಿರಿಸಿದ ಕಳ್ಳರು ದೋಚಲು ಪ್ಲಾನ್ ಹಾಕಿದ್ದಾಗ ಅವರ ಪಿಕ್ ಅಪ್ ವಾಹನವೇ ಕೆಟ್ಟು ಕೈಕೊಟ್ಟಿತ್ತಂತೆ.
ಓಮಿನಿಯಲ್ಲಿ ತಲವಾರು ಹಿಡಿದ ಗ್ಯಾಂಗ್ ಒಂದು ಮನೆಗಳ ಒಳಗಡೆ ,ಬಾರ್ ,ಮಳಿಗೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕದ್ದು ರಸ್ತೆ ಬದಿ ತಂದು ನಿಲ್ಲಿಸುತ್ತದೆ.ಹಿಂದಿನಿಂದ ಬಂದ ಪಿಕ್ ಅಪ್ ವಾಹನದಲ್ಲಿ ಕದ್ದ ಬೈಕ್ ಗಳನ್ನ ವ್ಯವಸ್ಥಿತವಾಗಿ ಕೇರಳಕ್ಕೆ ಸಾಗಿಸೋ ಜಾಲವನ್ನ ಸ್ಥಳೀಯ ಉದ್ಯಮಿ ಈ ಹಿಂದೆಯೇ ಸಿಸಿಟಿವಿ ದಾಖಲೆಗಳಿಂದ ಕಂಡು ಹಿಡಿದಿದ್ದರಂತೆ.