ಆಂಧ್ರಪ್ರದೇಶ : ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಭಾರತದ ಮೊದಲ ಮೀಸಲು ಕ್ವಾಂಟಂ ಮತ್ತು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಕ್ಯಾಂಪಸ್ ಸ್ಥಾಪಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ. ಇತ್ತೀಚೆಗೆ ನಡೆದ ಕ್ಯಾಪಿಟಲ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (CRDA) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಧೀನದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫರ್ಮೇಷನ್ ಟೆಕ್ನಾಲಜಿ (NIELIT) ಈ ಕ್ಯಾಂಪಸ್‌ನ್ನು ಅಭಿವೃದ್ಧಿಪಡಿಸಲಿದೆ. 8.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ ₹730.7 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದ ಮೂಲಕ ಯೋಜನೆ ಜಾರಿಯಾಗಲಿದೆ.
ವಿಶ್ವವಿದ್ಯಾಲಯದಲ್ಲಿ ಕ್ವಾಂಟಂ ಕಂಪ್ಯೂಟಿಂಗ್, ಕ್ವಾಂಟಂ ಕಮ್ಯುನಿಕೇಷನ್ ಮತ್ತು ಸೆಕ್ಯುರಿಟಿ, AI ಮತ್ತು ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್, ಚಿಪ್ ಡಿಸೈನ್, VLSI, ಎಂಬೆಡೆಡ್ ಸಿಸ್ಟಮ್ಸ್ ಹಾಗೂ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ, ಡಾಕ್ಟರಲ್, ಡಿಪ್ಲೊಮಾ ಮತ್ತು ಎಕ್ಸಿಕ್ಯೂಟಿವ್ ಕೋರ್ಸ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ.
2026ರ ಸೆಪ್ಟೆಂಬರ್‌ನಿಂದಲೇ ಶೈಕ್ಷಣಿಕ ಹಾಗೂ ಸುಧಾರಿತ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಗుంటೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ತಾತ್ಕಾಲಿಕ ಆವರಣದಲ್ಲಿ ಆರಂಭಿಸಲು ಯೋಜಿಸಲಾಗಿದೆ. ಅಮರಾವತಿಯಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣ ಪೂರ್ಣಗೊಂಡ ಬಳಿಕ ಕಾರ್ಯಕ್ರಮಗಳು ಅಲ್ಲಿಗೆ ಸ್ಥಳಾಂತರಗೊಳ್ಳಲಿವೆ.
ಯೋಜನೆಯಡಿ ಕ್ವಾಂಟಂ ಸಂಶೋಧನೆ, ನಾವೀನ್ಯತೆ ಮತ್ತು ಇನ್‌ಕ್ಯುಬೇಷನ್ ಬ್ಲಾಕ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಫೋಟಾನಿಕ್ಸ್ ಪ್ರಯೋಗಾಲಯಗಳು, ಸೆಮಿಕಂಡಕ್ಟರ್ ತಂತ್ರಜ್ಞಾನ, ಡೇಟಾ ಸೆಂಟರ್ ಹಾಗೂ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಐದು ವರ್ಷಗಳಲ್ಲಿ ಸುಮಾರು 8,250 ವಿದ್ಯಾರ್ಥಿಗಳು ಮತ್ತು ತರಬೇತಿದಾರರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಈ ಯೋಜನೆ ಭಾರತದ ನ್ಯಾಷನಲ್ ಕ್ವಾಂಟಂ ಮಿಷನ್, IndiaAI ಮಿಷನ್ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ಗಳಿಗೆ ಪೂರಕವಾಗಿದ್ದು, ಅಮರಾವತಿಯನ್ನು ಕ್ವಾಂಟಂ ಮತ್ತು ಡೀಪ್‌ಟೆಕ್ ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಆಂಧ್ರಪ್ರದೇಶದ ಯೋಜನೆಯ ಭಾಗವಾಗಿದೆ.

