ಶಿವಮೊಗ್ಗ : ದಶಕಗಳ ಬೇಡಿಕೆಯಾದ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಸಮರೋಪಾದಿಯಾಗಿ ಸಾಗಿದ್ದು, ಅಂತಿಮ ಹಂತದ ಕಾಮಗಾರಿಗಳು
ನಡೆಯುತ್ತಿವೆ. ಈ ನಡುವೆ ಕಳೆದ ಕೆಲ ದಿನಗಳಿಂದ, ಸೇತುವೆ ಡಾಂಬರೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಸಂಬಂಧ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಕಚೇರಿ ಮಾಧ್ಯಮ ತಂಡವು, ಸೇತುವೆ ಡಾಂಬರೀಕರಣದ ಪೋಟೋಗಳನ್ನು ಮಾರ್ಚ್ 22 ರಂದು ಬಿಡುಗಡೆ ಮಾಡಿದೆ. ಸೇತುವೆ ತಡೆಗೋಡೆ ಕೆಲಸ ಪೂರ್ಣಗೊಂಡಿದ್ದು, ಡಾಂಬರೀಕರಣ ಕಾಮಗಾರಿ ಬಿರುಸುಗೊಂಡಿದೆ. ಇದು ಅಂತ್ಯಗೊಂಡ ನಂತರ, ವಾಹನಗಳಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದುಹೇಳಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮೇ ತಿಂಗಳಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಅಧಿಕೃತವಾಗಿ ಸೇತುವೆ ಲೋಕಾರ್ಪಣೆಗೊಳ್ಳಲಿದ್ದು, ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಾಗಿದೆ.
ದಾಖಲೆ : ಸಿಗಂದೂರು ಸೇತುವೆಯ ಒಟ್ಟು ಉದ್ದ 2. 44 ಕಿ.ಮೀ. ಆಗಿದೆ. 16 ಮೀಟರ್ ಅಗಲದ 5 ಸ್ಪಾನ್ ಕೇಬಲ್ ಆಧಾರಿತವಾಗಿದೆ. ದಕ್ಷಿಣ ಭಾರತದಲ್ಲಿ ಕೇಬಲ್ ಆಧಾರಿತವಾಗಿ ನಿರ್ಮಾಣಗೊಂಡಿರುವ ಸೇತುವೆಗಳಲ್ಲಿ, ಮೊದಲ ಅತೀ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿ 2 ನೇ ಅತೀ ದೊಡ್ಡ ಹಾಗೂ ದೇಶದಲ್ಲಿ 7 ನೇ ಸೇತುವೆಯಾಗಲಿದೆ. ಸಿಗಂದೂರು ಸೇತುವೆಯು ಸಾಗರ, ಸಿಗಂದೂರು, ಕೊಲ್ಲೂರು ಭಾಗದ ಪ್ರವಾಸೋದ್ಯ ಬೆಳವಣಿಗೆಗೂ ಪೂರಕವಾಗಲಿದೆ.
ಕೊಲ್ಲೂರು ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ತುಮರಿ, ಬ್ಯಾಕೋಡಿನಂತ ಶರಾವತಿ ಹಿನ್ನೀರ ಗ್ರಾಮಗಳ ಬೆಳವಣಿಗೆಗೆ ಹೊಸ ರಹದಾರಿಯಾಗಲಿದೆ. ಸದರಿ ಸೇತುವೆಯು ನಾಡಿನ ಬೆಳಕಿಗಾಗಿ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರು ಭಾಗದ ಜನತೆಯ ಹಲವು ದಶಕಗಳ ಕನಸಾಗಿತ್ತು. ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈ ಭಾಗದ ಸಂಪರ್ಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಸದರಿ ಸೇತುವೆ ನಾಂದಿಯಾಗಲಿದೆ. ಕರಾವಳಿ ಭಾಗ ಸಂಪರ್ಕ ಸುಲಭ ಸಾಧ್ಯವಾಗಲಿದೆ.

