ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅನ್ವರ್ ಕಾಲೋನಿಯಲ್ಲಿ ‘ಇಸ್ಪೀಟ್ ಕಿಂಗ್’ ಎಂದೇ ಪರಿಚಿತರಾಗಿರುವ ಮುದ್ದೆ ಅಲಿಯಾಸ್ ವಿಶ್ವನಾಥ್ ಎಂ. (35) ಅವರ ಮೇಲೆ 6 ರಿಂದ 7 ಮಂದಿಯ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ವಿಶ್ವನಾಥ್ ಅವರನ್ನು ಬೆನ್ನಟ್ಟಿ ಹಿಡಿದ ದುಷ್ಕರ್ಮಿಗಳು ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಶ್ವನಾಥ್ ತೀವ್ರ ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಗಾಯಾಳುವನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರು ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಭದ್ರಾವತಿ ಪ್ರದೇಶದಲ್ಲಿ ‘ಇಸ್ಪೀಟ್ ಕಿಂಗ್’ ಎಂದೇ ಪರಿಚಿತರಾಗಿದ್ದು, ಇಸ್ಪೀಟ್ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದ ಹಳೆಯ ವೈಷಮ್ಯವೇ ದಾಳಿಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಆದರೆ ದಾಳಿಯ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಈ ಕುರಿತು ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

