ವಾಷಿಂಗ್ಟನ್ : ಅಮೆರಿಕದಲ್ಲಿ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಘೋಷಣೆಗಳು ಕೇಳಿಬಂದಿರುವ ಘಟನೆ ವರದಿಯಾಗಿದೆ. ಸಿಯಾಟೆಲ್ನಲ್ಲಿ ನಡೆದ ದೀಪಾವಳಿ ಆಚರಣೆಗೆ ಟ್ರಂಪ್ ಬೆಂಬಲಿತ ರಿಪಬ್ಲಿಕನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಭಾರತೀಯ ಅಮೆರಿಕನ್ನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ದೀಪಾವಳಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪ್ರತಿಭಟನಾಕಾರರು, ‘ಡಾಟ್ ಹೆಡ್ಸ್ಗಳನ್ನು ದೇಶದಿಂದ ಗಡೀಪಾರು ಮಾಡಿ’ ಹಾಗೂ ‘ಕ್ರೈಸ್ತ ಧರ್ಮದ ಬದಲಾವಣೆಯನ್ನು ತಡೆಯಿರಿ’ ಎಂಬ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಸಮುದಾಯದಿಂದ ತೀವ್ರ ಖಂಡನೆ
ಘಟನೆಯನ್ನು ಭಾರತ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ತೀವ್ರವಾಗಿ ಖಂಡಿಸಿದ್ದಾರೆ. ಇದು ಜನಾಂಗೀಯ ನಿಂದನೆಯಾಗಿದ್ದು, ಹಿಂದೂ ಅಮೆರಿಕನ್ನರು ಯಾವುದೇ ಭಯವಿಲ್ಲದೆ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸುವಂತಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಶ್ವೇತಭವನದ ಮಾಜಿ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಕೂಡ ಘಟನೆಯನ್ನು ಖಂಡಿಸಿದ್ದು, ಇದು ಧಾರ್ಮಿಕ ದ್ವೇಷ ಮತ್ತು ಧರ್ಮಾಂಧತೆಯ ಅಭಿವ್ಯಕ್ತಿ ಎಂದು ಹೇಳಿದ್ದಾರೆ.
ಜೇಕ್ ಲ್ಯಾಂಗ್, ಥಾಮಸ್ ಅಲೆನ್ ವಿರುದ್ಧ ಆಕ್ರೋಶ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಜೇಕ್ ಲ್ಯಾಂಗ್ ಮತ್ತು ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ದೀಪಾವಳಿ ಆಚರಿಸುತ್ತಿದ್ದವರೊಂದಿಗೆ ಇವರು ವಾಗ್ವಾದ ನಡೆಸಿದ್ದು, ಹಿಂದೂಗಳ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರನ್ನೂ ಸ್ಥಳದಿಂದ ಹೊರ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಜೇಕ್ ಲ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಟೆಕ್ಸಾಸ್ನಲ್ಲಿ ಡೆಮಾಕ್ರಾಟ್ಗಳ ಗೆಲುವಿಗೆ ಹಿಂದೂಗಳೇ ಕಾರಣ ಎಂಬ ಹೇಳಿಕೆಯನ್ನೂ ಅವರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಜನಾಂಗೀಯ ಸಮಾನತೆ ಹಾಗೂ ಹಿಂದೂ ಸಮುದಾಯದ ಸುರಕ್ಷತೆ ಕುರಿತು ಈ ಘಟನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

