ರಿಪ್ಪನ್ಪೇಟೆ : ಜಗತ್ತಿನ ಸರ್ವ ಜೀವಿಗಳ ಸಂರಕ್ಷಣೆ, ಪೋಷಣೆಗಾಗಿ 24ನೆಯ ತೀರ್ಥಂಕರ ಶ್ರೀ ವರ್ಧಮಾನ ಮಹಾವೀರ ಸ್ವಾಮಿ 2550 ವರ್ಷಗಳ ಹಿಂದೆ ವಿಶ್ವ ಭ್ರಾತೃತ್ವ, ಅಹಿಂಸಾವಾದ ಪ್ರಚುರಪಡಿಸಿದ ಶ್ರೀ ಮಹಾವೀರ ವಾಣಿಯನ್ನು ಇಂದು ಪ್ರತಿಯೊಬ್ಬರು ಆಚರಿಸುವಂತಾಗಬೇಕು ಎಂದು ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.
ದಕ್ಷಿಣ ಭಾರತದ ಜೈನರ ಕಾಶಿ ಎಂದು ಖ್ಯಾತಿ ಪಡೆದಿರುವ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಸೋಮವಾರ ಆಯೋಜಿಸಲಾದ ಇಪ್ಪನಾಲ್ಕನೇಯ ತೀರ್ಥಂಕರ ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ೨೫೫೦ ನೇ ನಿರ್ವಾಣೋತ್ಸವದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಪ್ರತಿಯೊಂದು ಮನೆಯಲ್ಲಿ ವಾತ್ಸಲ್ಯಮಯ ಸಾಮಾರಸ್ಯವು ಇದ್ದರೆ ರಾಜ್ಯ-ದೇಶ-ವಿಶ್ವದೆಲ್ಲೆಡೆ ಆರೋಗ್ಯದಾಯಕ ಶಾಂತಿಯ ಪರಿಸರ ನಿರ್ಮಾಣವಾಗುವುದು ನಿಶ್ಚಿತ. ಶ್ರೀ ಮಹಾವೀರ ತೀರ್ಥಂಕರ ರ ಉಪದೇಶಗಳು ಜೈನರರಿಗೆ ಮಾತ್ರ ಸೀಮಿತವಾಗಿರದೆ ವಿಶ್ವದ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಿದೆ ಎಂದರು.
ಹೊಂಬುಜ ಜೈನ ಮಠದಲ್ಲಿನ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿಗಳು ನೆರವೇರಿಸಲಾಯಿತು.ದೀಪಾವಳಿಯ ಅಮಾವಾಸ್ಯೆಯಂದು ಪ್ರಾತಃಕಾಲ ಶ್ರೀ ಮಹಾವೀರ ತೀರ್ಥಂಕರ ರ ನಿರ್ವಾಣ (ಮೋಕ್ಷ ಕಲ್ಯಾಣ) ಆಗಿರುವ ದ್ಯೋತಕವಾಗಿ ದೀಪ ಪ್ರಜ್ವಲನ ಮಾಡಿದರು. ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ರಾಜ್ಯದ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡಿದ್ದರು.


