ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನರಹಂತಕ ವ್ಯಾಘ್ರ ಮತ್ತೊಂದು ಬಲಿ ಪಡೆದಿದೆ.ಗದ್ದೆಯಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ದಾಳಿ ನಡೆಸಿದ ಹುಲಿ ಎಳೆದೊಯ್ಯುವ ವಿಫಲ ಯತ್ನ ನಡೆಸಿದೆ.ಬಡಗಲಪುರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ನರಹಂತಕ ಹುಲಿಗೆ ಮುಳ್ಳೂರಿನ ರೈತ ಬಲಿಯಾಗಿದ್ದಾನೆ.

ಮುಳ್ಳೂರು ಗ್ರಾಮದ ರಾಜಶೇಖರ ಮೂರ್ತಿ (55) ವ್ಯಾಘ್ರನ ವಕ್ರದೃಷ್ಟಿಗೆ ಬಲಿಯಾದ ರೈತ.ಇಂದು ಸರಿಸುಮಾರು ಮಧ್ಯಾಹ್ನ ಒಂದು ಗಂಟೆಯಲ್ಲಿ ನಡೆದಿರುವ ಘಟನೆ. ಘಟನೆ ನಡೆದ ಸ್ಥಳದಲ್ಲಿ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಸರಗೂರು ಪೊಲೀಸರು ಬೀಡುಬಿಟ್ಟಿದ್ದಾರೆ.
ಮುಳ್ಳೂರು ಮತ್ತು ಸುತ್ತಮುತ್ತಲು ಗ್ರಾಮದ ರೈತರು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮುಳ್ಳೂರು ಗ್ರಾಮದ ಸಮೀಪ ಯಾವುದೇ ಕಾಡು ಪ್ರದೇಶ ಇಲ್ಲದಿದ್ದರೂ ವ್ಯಾಘ್ರನ ದಾಳಿ ಆತಂಕ ಸೃಷ್ಟಿಸಿದೆ. ಬಡಗಲಪುರ ಗ್ರಾಮದಲ್ಲಿ ಓರ್ವ ರೈತನನ್ನ ಬಲಿ ಪಡೆದ ಬೆನ್ನ ಹಿಂದೆಯೇ ದಸರಾ ಆನೆಗಳ ನೆರವಿನಿಂದ ಕೂಂಬಿಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು.ಹುಲಿ ಸೆರೆಯಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು.ಇದೀಗ ಮತ್ತೊಂದು ಬಲಿ ಪಡೆದಿರುವುದು ಸ್ಥಳೀಯರ ನಿದ್ದೆ ಕೆಡಿಸಿದೆ.ನರಹಂತಕ ವ್ಯಾಘ್ರನನ್ನ ಗುರುತಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೇವಲ ಒಂದೇ ತಿಂಗಳಲ್ಲಿ ಹುಲಿ ದಾಳಿಗೆ ಇಬ್ಬರು ರೈತರು ಬಲಿಯಾಗಿರುವ ಘಟನೆಯನ್ನ ಹಗುರವಾಗಿ ಪರಿಗಣಿಸದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ…


