ಮೈಸೂರು : “ಭಾರತ ಹಿಂದೂ ರಾಷ್ಟ್ರವಾಗಬಾರದು” ಎಂಬ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಸ್ಲಿಂ ರಾಷ್ಟ್ರಗಳಿವೆ, ಕ್ರೈಸ್ತ ರಾಷ್ಟ್ರಗಳಿವೆ. ಹಿಂದೂಗಳಿಗೆ ಇರುವ ಏಕೈಕ ರಾಷ್ಟ್ರ ಭಾರತ. ಯತೀಂದ್ರ ಹೇಳಿದ ತಕ್ಷಣ ಹಿಂದೂ ರಾಷ್ಟ್ರದ ಪರಿಕಲ್ಪನೆ ನಿಲ್ಲುವುದಿಲ್ಲ. ಸೂರ್ಯ-ಚಂದ್ರ ಇರುವವರೆಗೂ ಇದು ಹಿಂದೂ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಿಂದೂ ರಾಷ್ಟ್ರವಾಗಲಿದೆ. ಕೋಟ್ಯಂತರ ಜನ ಅದಕ್ಕಾಗಿ ಕಾಯುತ್ತಿದ್ದಾರೆ. ಯತೀಂದ್ರ ಯಾಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ” ಎಂದು ಹೇಳಿದರು.
ಇದೇ ವೇಳೆ, ಬಿಜೆಪಿಗೆ ಮರು ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಪಕ್ಷದ ಹಿರಿಯ ನಾಯಕರು ಹಾಗೂ ಅಧಿಕಾರದಲ್ಲಿರುವವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.
“ನಾನು ಅವರಿಗೆ ಕೆಲವು ಬೇಡಿಕೆಗಳನ್ನು ತಿಳಿಸಿದ್ದೇನೆ. ಅವು ಷರತ್ತುಗಳಲ್ಲ. ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ನನ್ನ ರಕ್ತವೇ ಬಿಜೆಪಿ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಬದಲಾವಣೆಗಳು ಆಗಬೇಕಿದೆ. ಅದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು” ಎಂದು ಅವರು ಸ್ಪಷ್ಟಪಡಿಸಿದರು.

