ಮಾಸ್ಕೋ : ಕಚ್ಚಾ ತೈಲ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಇದೀಗ ಪೆಟ್ರೋಲ್ ಕೊರತೆಯಿಂದ ಭಾರತದಿಂದ ಗ್ಯಾಸೋಲಿನ್ (ಪೆಟ್ರೋಲ್) ಆಮದು ಮಾಡಿಕೊಳ್ಳಲು ಮುಂದಾಗಿದೆ.
ಉಕ್ರೇನ್ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಂದ ರಷ್ಯಾದ ಹಲವು ತೈಲ ಸಂಸ್ಕರಣಾ ಘಟಕಗಳು ಹಾನಿಗೊಳಗಾಗಿದ್ದು, ಇಂಧನ ಉತ್ಪಾದನೆ ಕುಂಠಿತಗೊಂಡಿದೆ. ಇದರ ಪರಿಣಾಮ ದೇಶದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿದ್ದು, ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳಲಾಗುತ್ತಿದೆ.
ಮೂಲಗಳ ಪ್ರಕಾರ, ಭಾರತ ಈಗಾಗಲೇ ಸುಮಾರು 60 ಸಾವಿರ ಟನ್ ಪೆಟ್ರೋಲ್ ಅನ್ನು ರಷ್ಯಾಕ್ಕೆ ರವಾನಿಸಲು ಹಡಗಿನಲ್ಲಿ ತುಂಬಿಸಿದ್ದು, ತಲಾ 30ರಿಂದ 40 ಸಾವಿರ ಟನ್ ಗ್ಯಾಸೋಲಿನ್ ಹೊತ್ತ ಎರಡು ಹಡಗುಗಳು ರಷ್ಯಾದತ್ತ ಪ್ರಯಾಣ ಬೆಳೆಸಿವೆ.
ರಷ್ಯಾ ಪ್ರತಿ ತಿಂಗಳು ಸುಮಾರು 4 ಲಕ್ಷ ಟನ್ ಪೆಟ್ರೋಲ್ ಅನ್ನು ಭಾರತ, ಬೆಲಾರಸ್ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಯೋಜನೆ ರೂಪಿಸಿದೆ. ಆದರೆ ಭಾರತದ ಯಾವ ತೈಲ ಸಂಸ್ಕರಣಾ ಘಟಕದಿಂದ ಈ ಪೂರೈಕೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.
ಬೇಸಿಗೆ ಅವಧಿಯಲ್ಲಿ ರಷ್ಯಾದಲ್ಲಿ ದಿನಕ್ಕೆ ಸುಮಾರು 1.10 ಲಕ್ಷ ಟನ್ ಗ್ಯಾಸೋಲಿನ್ ಬಳಕೆಯಾಗುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಇಂಧನ ಕೊರತೆ ತೀವ್ರವಾಗಿದೆ. ಪರಿಣಾಮವಾಗಿ ಪೆಟ್ರೋಲ್ ಮತ್ತು ಅನಿಲವನ್ನು ಪಡಿತರ ವ್ಯವಸ್ಥೆಯಡಿ ವಿತರಿಸಲಾಗುತ್ತಿದ್ದು, ಪೆಟ್ರೋಲ್ ಬಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಇಂಧನ ದರಗಳೂ ಏರಿಕೆಯಾಗಿವೆ.

