ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 18ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಿತ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಹಾಗೂ ಸಂಘಟಕ ಪರಮಾನಂದ ಸಾಲ್ಯಾನ್ ಅವರಿಗೆ ಭಾನುವಾರ ಸಸಿಹಿತ್ಲುವಿನ ಅವರ ನಿವಾಸದಲ್ಲಿ ನಡೆದ ಸರಳ ಹಾಗೂ ಆತ್ಮೀಯ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ನಾ. ದಾಮೋದರ ಶೆಟ್ಟಿ ಅವರು ಮಾತನಾಡಿ, ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ಜನಪದ ತಜ್ಞ ಕೆ.ಕೆ. ಪೇಜಾವರ ಅವರು ಪರಮಾನಂದ ಸಾಲ್ಯಾನ್ ಅವರೊಂದಿಗಿನ ದೀರ್ಘಕಾಲದ ಸ್ನೇಹವನ್ನು ಸ್ಮರಿಸಿದರು. ಜನಪ್ರಿಯ ನಟ ನವೀನ್ ಡಿ ಪಡೀಲ್ ಅವರು ಪರಮಾನಂದರ ಸಹೃದಯತೆ ಹಾಗೂ ಕಲೆಯ ಮೇಲಿನ ಅವರ ಅಪಾರ ಪ್ರೀತಿಯನ್ನು ನೆನಪಿಸಿಕೊಂಡು ಶುಭ ಹಾರೈಸಿದರು.
ಸಂಘಟಕ ಹಾಗೂ ನಟ ಯತೀಶ್ ಬೈಕಂಪಾಡಿ ಅವರು ಪರಮಾನಂದ ಸಾಲ್ಯಾನ್ ಇನ್ನಷ್ಟು ಆತ್ಮಸ್ಥೈರ್ಯದಿಂದ ಆರೋಗ್ಯ ವೃದ್ಧಿಸಿಕೊಳ್ಳುವಂತೆ ಹಾರೈಸಿದರು.
ದಿವಂಗತ ಭಾಸ್ಕರ ನೆಲ್ಲಿತೀರ್ಥ ಅವರ ಸ್ಮರಣಾರ್ಥ ನೀಡಲಾಗುವ ರಂಗಭಾಸ್ಕರ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ ಅವರು ಪ್ರಾಯೋಜಿಸುತ್ತಿದ್ದಾರೆ. ಪ್ರಶಸ್ತಿಯು ಸನ್ಮಾನ ಪತ್ರ, ಶಾಲು, ಹಾರ, ಸ್ಮರಣಿಕೆ ಹಾಗೂ ₹35,000 ನಗದು ಬಹುಮಾನವನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್ ಸೇರಿದಂತೆ ಹಲವಾರು ಗಣ್ಯರು, ರಂಗಸಂಗಾತಿ ಸದಸ್ಯರು, ಶಿಷ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.


