ಮಂಗಳೂರು : ರಾಜ್ಯ ಮಟ್ಟದ ಗೇರು ಮೇಳವು ಮೇ 17 ಮತ್ತು 18ರಂದು ನಗರದ ಕದ್ರಿ ಉದ್ಯಾನವನದಲ್ಲಿ ನಡೆಯಲಿದ್ದು, ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆಯವರು ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತ ಗಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 17ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಫರೀದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೌರವ ಉಪಸ್ಥಿತರಾಗಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಗೋಡಂಬಿ ಕೃಷಿ ಕುರಿತು ತಾಂತ್ರಿಕ ಕಾರ್ಯಾಗಾರ.
ಗೇರು ಮೇಳದ ಅಂಗವಾಗಿ ಎರಡು ದಿನಗಳ ಕಾಲ ಗೋಡಂಬಿ ಕೃಷಿ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ತಾಂತ್ರಿಕ ಕಾರ್ಯಾಗಾರ ನಡೆಯಲಿದೆ. ಐಸಿಎಆರ್-ಡಿಸಿಆರ್ ಪುತ್ತೂರಿನ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಅವರು “ಆಧುನಿಕ ತಂತ್ರಜ್ಞಾನಗಳು ಗೋಡಂಬಿ ಕೃಷಿಯಲ್ಲಿ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಿರಿಯ ವಿಜ್ಞಾನಿ ಡಾ. ವೀಣಾ ಜಿ.ಎಲ್. ಗೌಡ ಅವರು ಗೋಡಂಬಿ ಸಂಸ್ಕರಣೆ ಮತ್ತು ಮೌಲ್ಯ ಸೇರ್ಪಡೆ ಕುರಿತು ಮಾಹಿತಿ ನೀಡಲಿದ್ದಾರೆ. ಪ್ರಗತಿಪರ ರೈತ ಸುಭಾನ್ ರೈ ತಮ್ಮ ಗೋಡಂಬಿ ಕೃಷಿಯ ಅನುಭವ ಹಂಚಿಕೊಳ್ಳಲಿದ್ದು, ವಿಶ್ವಕೇಶವ ಅವರು ಗೋಡಂಬಿ ಹಾಗೂ ಅಡಿಕೆ ಸಂಸ್ಕರಣೆಯತ್ತ ತಮ್ಮ ಪ್ರಯಾಣದ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮೇ 18ರಂದು ನಡೆಯುವ ತಾಂತ್ರಿಕ ಅಧಿವೇಶನದಲ್ಲಿ ಕೆಸಿಎಂಎ ಮಾಜಿ ಅಧ್ಯಕ್ಷ ಪ್ರಕಾಶ್ ಕಲ್ಬಾವಿ “ಗೋಡಂಬಿ ಕೃಷಿ ಆತ್ಮನಿರ್ಭರ್-2035” ವಿಷಯ ಮಂಡನೆ ಮಾಡಲಿದ್ದಾರೆ. ಮಾಜಿ ನಿರ್ದೇಶಕ ಡಾ. ವೆಂಕಟೇಶ್ ಎನ್. ಅವರು ಭಾರತೀಯ ಗೋಡಂಬಿ ವಲಯದ ಕುರಿತು ಮಾಹಿತಿ ನೀಡಲಿದ್ದು, ಶಿವಮೊಗ್ಗ ವಿಶ್ವವಿದ್ಯಾಲಯದ ಡಾ. ಸಿ. ಸುನಿಲ್ ಗೋಡಂಬಿ ತಂತ್ರಜ್ಞಾನ ಕುರಿತ ಕೊಡುಗೆಗಳ ಬಗ್ಗೆ ಮಾತನಾಡಲಿದ್ದಾರೆ. ಕೊಚ್ಚಿಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಉಪ ನಿರ್ದೇಶಕ ದಾದಾಸಾಹೇಬ್ ದೇಸಾಯಿ ಅವರು ಭಾರತ ಸರ್ಕಾರದ ಗೋಡಂಬಿ ಬೆಳೆ ಯೋಜನೆಗಳು, ಉಪಕ್ರಮಗಳು ಹಾಗೂ ನರ್ಸರಿಗಳ ಮಾನ್ಯತೆ ಕುರಿತ ಮಾಹಿತಿ ನೀಡಲಿದ್ದಾರೆ.
ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಗಾಗಿ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಗೇರು ಬೆಳೆಯಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಸನ್ಮಾನಿಸಲಾಗುವುದು. ಮೇಳದ ವಿಶೇಷ ಆಕರ್ಷಣೆಯಾಗಿ ಮೇ 17ರಂದು ಸಂಜೆ 7 ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದಿಂದ ತುಳು ನಾಟಕ “ಮನಸ್ಕಾರ ಮಾಸ್ಟರ್” ಪ್ರದರ್ಶನ ನಡೆಯಲಿದೆ. ಮೇ 18ರಂದು ಸಂಜೆ ಇಂಚರ ಮೆಲೋಡೀಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗೇರು ಮೇಳದ ಪ್ರಮುಖ ವೈಶಿಷ್ಟ್ಯಗಳು ಗೇರು ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಕಾರ್ಯಾಗಾರ ಗೇರು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಅವಕಾಶ 70ಕ್ಕೂ ಹೆಚ್ಚು ಮಾರಾಟ ಮಳಿಗೆಗಳು ಚಿತ್ರಕಲಾ, ರಂಗೋಲಿ ಹಾಗೂ ಆನ್ಲೈನ್ ಭಾಷಣ ಸ್ಪರ್ಧೆಗಳುಭಾಗವಹಿಸುವವರಿಗೆ ಉಚಿತ ಗೇರು ಹಣ್ಣಿನ ಜ್ಯೂಸ್ “ಮನೆಗೊಂದು ಗೇರು” ಅಭಿಯಾನ ಗೇರು ಕೃಷಿ ಸಾಧಕರಿಗೆ ಸನ್ಮಾನ, ರಾಜ್ಯ ಮಟ್ಟದ ಈ ಗೇರು ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.


