ಮೂಡುಬಿದಿರೆ : ಈಶ ಗ್ರಾಮೋತ್ಸವ 2026ರ 18ನೇ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಗಳು ಆ. 9ರಂದು ಮೂಡುಬಿದಿರೆಯಲ್ಲಿ ಆರಂಭವಾಗಲಿವೆ. ಬೆಳಿಗ್ಗೆ 9.30ಕ್ಕೆ ಸ್ವರಾಜ್ ಮೈದಾನ ಪಬ್ಲಿಕ್ ಗ್ರೌಂಡ್ನಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಇಶಾ ಫೌಂಡೇಶನ್ ನ ಮಾಧ್ಯಮ ಸಂಯೋಜಕರಾದ ಲತಾ ರವರು ತಿಳಿಸಿದ್ದಾರೆ.
ಈಶ ಔಟ್ರೀಚ್ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ 18 ಪುರುಷರ ವಾಲಿಬಾಲ್ ತಂಡಗಳು ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳ 300ಕ್ಕೂ ಅಧಿಕ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಕ್ರೀಡೆಯ ಮೂಲಕ ಸಮುದಾಯದ ಬಾಂಧವ್ಯವನ್ನು ಬಲಪಡಿಸುವುದು ಗ್ರಾಮೋತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು.
ಪ್ರಮುಖ ಗಣ್ಯರ ಉಪಸ್ಥಿತಿ ಮೂಡುಬಿದಿರೆ ಜೈನ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಧನಲಕ್ಷ್ಮಿ ಕ್ಯಾಶೂಸ್ ಮಾಲೀಕ ಶ್ರೀಪತಿ ಭಟ್, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಎಸ್. ಮುಂಡಲಮನಿ, ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ನಿಶ್ಮಿತಾ ಟವರ್ಸ್ ಮಾಲೀಕ ನಾರಾಯಣ ಎಂ. ಸೇರಿದಂತೆ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
40 ಸಾವಿರಕ್ಕೂ ಅಧಿಕ ಗ್ರಾಮಗಳ ವ್ಯಾಪ್ತಿ ಈ ವರ್ಷದ ಗ್ರಾಮೋತ್ಸವವು ಹಿಂದಿನ ಆವೃತ್ತಿಗಳಿಗಿಂತ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, 10 ರಾಜ್ಯಗಳು ಮತ್ತು ಪುದುಚೇರಿ ಸೇರಿದಂತೆ 40 ಸಾವಿರಕ್ಕೂ ಅಧಿಕ ಗ್ರಾಮಗಳನ್ನು ತಲುಪುವ ಗುರಿ ಹೊಂದಿದೆ. ಸುಮಾರು 7 ಸಾವಿರ ತಂಡಗಳ ಮೂಲಕ 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇವರಲ್ಲಿ ಸುಮಾರು 15 ಸಾವಿರ ಮಹಿಳಾ ಆಟಗಾರರು ಇರಲಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಯ ಜೊತೆಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ ಹಾಗೂ ಮಹಾರಾಷ್ಟ್ರಗಳಿಗೂ ಈ ಬಾರಿ ಗ್ರಾಮೋತ್ಸವ ವಿಸ್ತರಿಸಿದೆ.
ರಾಷ್ಟ್ರೀಯ ಫೈನಲ್ಗೆ ಅರ್ಹತಾ ಸುತ್ತು ಕರ್ನಾಟಕ ವಿಭಾಗೀಯ ಪಂದ್ಯಗಳು ರಾಷ್ಟ್ರೀಯ ಫೈನಲ್ಸ್ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ತಂಡಗಳ ಆಯ್ಕೆಗೆ ಪ್ರಮುಖ ಅರ್ಹತಾ ಸುತ್ತಾಗಿವೆ. ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳು ಕ್ಲಸ್ಟರ್, ವಿಭಾಗೀಯ ಹಾಗೂ ಅಂತಿಮ ಹಂತಗಳಲ್ಲಿ ನಡೆಯುತ್ತವೆ.
ವೃತ್ತಿಪರ ಆಟಗಾರರನ್ನು ಸ್ಪರ್ಧೆಯಿಂದ ಹೊರಗಿಟ್ಟು ಗ್ರಾಮೀಣ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಅನುಭವ ನೀಡುವುದು ಗ್ರಾಮೋತ್ಸವದ ವಿಶೇಷತೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ಈಶ ಗ್ರಾಮೋತ್ಸವವು 35 ಸಾವಿರಕ್ಕೂ ಅಧಿಕ ಗ್ರಾಮಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಟಗಾರರನ್ನು ತಲುಪಿದೆ ಎಂದು ಹೇಳಿದ್ದಾರೆ.
ಕ್ರೀಡೆಯಿಂದ ಗ್ರಾಮೀಣ ಸಬಲೀಕರಣ ಕ್ರೀಡೆಯು ಗ್ರಾಮೀಣ ಸಮುದಾಯಗಳನ್ನು ಒಗ್ಗೂಡಿಸುವ ಹಾಗೂ ಯುವಜನರಲ್ಲಿ ಉತ್ಸಾಹ, ಆರೋಗ್ಯ ಮತ್ತು ಸಕಾರಾತ್ಮಕ ಮನೋಭಾವ ಬೆಳೆಸುವ ಪ್ರಮುಖ ಸಾಧನವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈಶ ಔಟ್ರೀಚ್, ಈಶ ಫೌಂಡೇಶನ್ನ ಸಾಮಾಜಿಕ ಚಟುವಟಿಕೆಗಳ ವಿಭಾಗವಾಗಿದ್ದು, ಗ್ರಾಮೀಣ ಪುನರುಜ್ಜೀವನ, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಎಂದರು.
ಹೆಚ್ಚಿನ ಮಾಹಿತಿಗಾಗಿ: 8147618118.

