ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ಖಾಸಗಿ ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಕ್ಯಾಂಪಸ್ ಒಳಗೂ ಹೊರಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಆರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಗಳ ಆರೋಪದ ಪ್ರಕಾರ, ಕೆಲ ಹಿರಿಯ ವಿದ್ಯಾರ್ಥಿಗಳು ಜೂನಿಯರ್ಗಳನ್ನು ತಮ್ಮ ಖಾಸಗಿ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಅವಮಾನಕಾರಿ ರೀತಿಯಲ್ಲಿ ವರ್ತಿಸುತ್ತಿದ್ದರು. ಬಟ್ಟೆ ಬಿಚ್ಚಿಸಿ ಕೇವಲ ಒಳ ಉಡುಪಿನಲ್ಲಿ ಕೂರಿಸುವುದು, ವಿಚಿತ್ರ ಹಾಗೂ ಅವಹೇಳನಕಾರಿ ಕೃತ್ಯಗಳನ್ನು ಮಾಡಿಸುವುದು, ಕರೆದಾಗ ಹೋಗದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವುದು ಸೇರಿದಂತೆ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇಬ್ಬರು ವಿದ್ಯಾರ್ಥಿಗಳು ರ್ಯಾಗಿಂಗ್ನ ಭೀಕರ ಅನುಭವವನ್ನು ಬಹಿರಂಗಪಡಿಸಿದ್ದು, ಇನ್ನೂ ಹಲವು ಪ್ರಥಮ ವರ್ಷದ ವಿದ್ಯಾರ್ಥಿಗಳು ಭಯದಿಂದ ಯಾರಿಗೂ ಹೇಳದೆ ಕಿರುಕುಳ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ ಪಾಂಡೇಶ್ವರ ಠಾಣೆ ಪೊಲೀಸರು ಕಾಲೇಜಿಗೆ ಭೇಟಿ ನೀಡಿ, ಆರೋಪಿತ ಆರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ರ್ಯಾಗಿಂಗ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
ಈ ಘಟನೆ ಕಾಲೇಜು ಕ್ಯಾಂಪಸ್ಗಳಲ್ಲಿ ರ್ಯಾಗಿಂಗ್ ನಿಯಂತ್ರಣ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

