ಮಂಗಳೂರು : ವಾಮಂಜೂರಿನ ತಿರುವೈಲು ಶಾಲೆ ಸಮೀಪದ ಕೆತ್ತಿಕಲ್ ಬೆಟ್ಟದಲ್ಲಿ ಮಂಗಳವಾರ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬೃಹತ್ ಬಂಡೆಗಳು ಹಾಗೂ ಮಣ್ಣು ರಸ್ತೆಗೆ ಉರುಳಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೆಯ ಪರಿಣಾಮ ಮಧ್ಯಾಹ್ನದ ವೇಳೆ ಬೆಟ್ಟದ ಒಂದು ಭಾಗ ಕುಸಿದು ದೊಡ್ಡ ಪ್ರಮಾಣದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಬಿದ್ದಿವೆ. ಕೆಲವೇ ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮತ್ತೆ ಭೂಕುಸಿತ ಸಂಭವಿಸಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಭೂಕುಸಿತದ ಬಳಿಕ ಬೆಟ್ಟದ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಕಳೆದ ವರ್ಷದ ಮಳೆಗಾಲದಲ್ಲಿಯೂ ಕೆತ್ತಿಕಲ್ ಪ್ರದೇಶದಲ್ಲಿ ಹಲವು ಬಾರಿ ಭೂಕುಸಿತ ಸಂಭವಿಸಿತ್ತು. ಆಗ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಅಗತ್ಯ ತಡೆಗಟ್ಟುವ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು.
ಆದರೆ ತಿರುವೈಲು ಶಾಲೆ ಸಮೀಪ ಸಮರ್ಪಕ ರಕ್ಷಣಾ ಕಾಮಗಾರಿ ಕೈಗೊಳ್ಳದಿರುವುದರಿಂದಲೇ ಭೂಕುಸಿತ ಮರುಕಳಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಟ್ಟದ ಅವೈಜ್ಞಾನಿಕ ಉತ್ಖನನದಿಂದ ಮಣ್ಣು ಸಡಿಲಗೊಂಡಿದ್ದು, ಮಳೆ ಬಂದಾಗಲೆಲ್ಲಾ ಭೂಕುಸಿತ ಸಂಭವಿಸುತ್ತಿದೆ ಎಂದು ದೂರಿದ್ದಾರೆ.
ಬೆಟ್ಟದ ಮೇಲ್ಭಾಗದಲ್ಲಿ ಮನೆಗಳಿದ್ದು, ಅಲ್ಲಿನ ನಿವಾಸಿಗಳು ಅಪಾಯದ ಭೀತಿಯಲ್ಲಿ ಬದುಕುವಂತಾಗಿದೆ. ಶಾಶ್ವತ ತಡೆಗಟ್ಟುವ ಕಾಮಗಾರಿ ಕೈಗೊಂಡು ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಬೇಕೆಂದು ಸ್ಥಳೀಯರು ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.

