ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಾಲೆ (ಜಾಂಡೀಸ್/ಹೆಪಟೈಟಿಸ್–A ಮತ್ತು E) ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಡೋಂಗರಕೆರೆ, ಅಳಕೆ ಹಾಗೂ ಕುದ್ರೋಳಿ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲುಷಿತ ನೀರು ಮತ್ತು ಆಹಾರದ ಮೂಲಕ ಈ ಸೋಂಕು ಹರಡುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಕಾಮಾಲೆಯ ಲಕ್ಷಣಗಳಾದ ಜ್ವರ, ಆಯಾಸ, ಹಸಿವಿನ ಕೊರತೆ, ವಾಕರಿಕೆ, ವಾಂತಿ, ಹೊಟ್ಟೆ ನೋವು, ಮೂತ್ರದ ಬಣ್ಣ ಗಾಢವಾಗುವುದು ಹಾಗೂ ಕಣ್ಣು–ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.
ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯ ಬಳಕೆಯ ಬಳಿಕ ಸಾಬೂನಿನಿಂದ ಕೈ ತೊಳೆಯುವುದು, ಸುರಕ್ಷಿತ ಕುಡಿಯುವ ನೀರು ಬಳಸುವುದು, ಬೀದಿ ಬದಿಯ ಆಹಾರ ಸೇವನೆ ತಪ್ಪಿಸುವುದು ಹಾಗೂ ಸ್ವಯಂ ಔಷಧಿ ಸೇವಿಸದಂತೆ ಇಲಾಖೆ ಸಲಹೆ ನೀಡಿದೆ.
ಗರ್ಭಿಣಿಯರಲ್ಲಿ ಹೆಪಟೈಟಿಸ್–E ಸೋಂಕು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಡೋಂಗರಕೆರೆ, ಅಳಕೆ ಮತ್ತು ಕುದ್ರೋಳಿ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿಯಿಂದ ಮನೆಮನೆಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ, ರೋಗ ಪತ್ತೆ ಕಾರ್ಯ ಹಾಗೂ ಅಗತ್ಯವಿರುವ ಕಡೆ ಬಾವಿ ನೀರಿನ ಕ್ಲೋರಿನೇಶನ್ ಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


