Friday, September 11, 2026
Homeಜಿಲ್ಲೆಮಂಗಳೂರು : ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡದಲ್ಲಿ 10 ಲಕ್ಷ ಸಹಿ ಅಭಿಯಾನ.

ಮಂಗಳೂರು : ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡದಲ್ಲಿ 10 ಲಕ್ಷ ಸಹಿ ಅಭಿಯಾನ.

ಮಂಗಳೂರು : ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು ಹಾಗೂ ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಿ.ಎಚ್.ಪಿ. ಪ್ರಾಂತ ಸಂಚಾಲಕ ಶರಣ್ ಪಂಪವೆಲ್ ತಿಳಿಸಿದ್ದಾರೆ.

ದೇಶಾದ್ಯಂತ ನಡೆಯುತ್ತಿರುವ ‘ಗೋಮಾತೆಯ ಗೌರವ’ ಅಭಿಯಾನದ ಮೂರನೇ ಹಂತ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಮಠ–ಮಂದಿರಗಳ ಸಹಯೋಗದಲ್ಲಿ ಅಭಿಯಾನ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 108 ಮಂದಿಯ ಜಿಲ್ಲಾ ಸಮಿತಿ, ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ತಲಾ 21 ಮಂದಿಯ ಸಮಿತಿ ಹಾಗೂ ಗ್ರಾಮಮಟ್ಟದಲ್ಲಿ ಆರು ಮಂದಿಯ ಸಮಿತಿಗಳನ್ನು ರಚಿಸಲಾಗಿದೆ. ಮುಂದಿನ ಎರಡು ತಿಂಗಳ ಕಾಲ ಕಾರ್ಯಕರ್ತರು ಮನೆಮನೆಗೆ ತೆರಳಿ ಸಹಿ ಸಂಗ್ರಹಿಸಲಿದ್ದಾರೆ.

ದೇಶಾದ್ಯಂತ 30 ಕೋಟಿ ಸಹಿ ಗುರಿ. : ದೇಶವ್ಯಾಪಿ ಕಳೆದ ಫೆಬ್ರುವರಿಯಲ್ಲಿ ನಡೆದ ಮೊದಲ ಹಂತದಲ್ಲಿ ಸುಮಾರು 5 ಕೋಟಿ ಸಹಿ ಸಂಗ್ರಹಿಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜುಲೈನಲ್ಲಿ ಮುಕ್ತಾಯಗೊಂಡ ಎರಡನೇ ಹಂತದಲ್ಲಿ ಮತ್ತೆ 16 ಕೋಟಿ ಸಹಿ ಸಂಗ್ರಹಿಸಿ ಜನರ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದೀಗ ಮೂರನೇ ಹಂತದಲ್ಲಿ ದೇಶಾದ್ಯಂತ ಹೆಚ್ಚುವರಿಯಾಗಿ 30 ಕೋಟಿ ಸಹಿ ಸಂಗ್ರಹಿಸಿ, ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಶರಣ್ ಪಂಪವೆಲ್ ತಿಳಿಸಿದರು.

ಡಿಸೆಂಬರ್ 17ರಂದು ಬೃಹತ್ ಸಮಾವೇಶ ಅಭಿಯಾನದಲ್ಲಿ ಸಂಗ್ರಹಿಸಲಾದ ಸಹಿಪತ್ರಗಳನ್ನು ಡಿಸೆಂಬರ್ 17ರಂದು ಮೂರು ಲಕ್ಷಕ್ಕೂ ಹೆಚ್ಚು ಗೋಪ್ರೇಮಿಗಳ ಬೃಹತ್ ಸಮಾವೇಶದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಗೋಸೇವಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಹಂತದಲ್ಲೂ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಫೆಬ್ರುವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಸಮಾವೇಶ ನಡೆಸಿ ರಾಷ್ಟ್ರಪತಿಗಳಿಗೆ ನೇರವಾಗಿ ಮನವಿಪತ್ರ ಸಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧು–ಸಂತರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಮುಂದಾಗಲಿದ್ದಾರೆ ಎಂದರು.

ಗಣೇಶೋತ್ಸವಗಳ ಮೂಲಕವೂ ಸಹಿ ಸಂಗ್ರಹ ಗಣೇಶೋತ್ಸವದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಅಭಿಯಾನಕ್ಕೆ ವಿಶೇಷ ಚಾಲನೆ ನೀಡಲಾಗುತ್ತಿದೆ. ಪ್ರತಿ ಗಣೇಶೋತ್ಸವದಲ್ಲಿ ಕಾರ್ಯಕರ್ತರು ವಿಘ್ನವಿನಾಶಕನಿಗೆ ವಿಶೇಷ ಪ್ರಾರ್ಥನೆ, ಸಂಕಲ್ಪ ಹಾಗೂ ಪೂಜೆ ಸಲ್ಲಿಸಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಿದ್ದಾರೆ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಸಹಿ ಸಂಗ್ರಹಕ್ಕಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುವುದು. ಅಲ್ಲದೆ ಕಾರ್ಯಕರ್ತರು ಮನೆಮನೆಗೆ ತೆರಳಿ ಸಹಿ ಸಂಗ್ರಹಿಸಲಿದ್ದಾರೆ.

ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು, ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ಗೋವಿನ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವ ಸಂಪುಟ ಖಾತೆ ರಚಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಭಿಯಾನ ನಡೆಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಅಭಿಯಾನದಲ್ಲಿ ತೊಡಗಿಸಿಕೊಂಡಿವೆ.

ಅಭಿಯಾನದ ಜಿಲ್ಲಾ ಪ್ರಭಾರಿಗಳಾಗಿ ಶಿವಾನಂದ ಮೆಂಡನ್, ಸಹ ಪ್ರಭಾರಿಗಳಾಗಿ ಅಶೋಕ್ ಇಳಂತಿಲ ಮತ್ತು ಶಾಂಭವಿ, ಜಿಲ್ಲಾ ಸಂಯೋಜಕರಾಗಿ ಉದಯಶಂಕರ ಭಟ್ ಮಿತ್ತೂರು ಹಾಗೂ ಸಹ ಸಂಯೋಜಕರಾಗಿ ರಮೇಶ್ ಭಟ್ ಸರವು ಕಾರ್ಯನಿರ್ವಹಿಸುತ್ತಿದ್ದಾರೆ. ಗೋಸೇವಾ ಗತಿವಿಧಿ, ಬಿಜೆಪಿ, ಪರ್ಯಾವರಣ ಗತಿವಿಧಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ, ಬಜರಂಗದಳ, ಸಾಮರಸ್ಯ ಗತಿವಿಧಿ, ಭಾರತೀಯ ಕಿಸಾನ್ ಸಂಘ, ರಿಕ್ಷಾ ಚಾಲಕರ ಸಮಿತಿ, ಹಿಂದೂ ಜಾಗರಣ ವೇದಿಕೆ, ಸಹಕಾರ ಭಾರತಿ, ಎಬಿವಿಪಿ, ಗ್ರಾಮವಿಕಾಸ, ಹಿಂದೂ ಜನಜಾಗೃತಿ ಸಮಿತಿ, ಭಾರತೀಯ ಮಜ್ದೂರ್ ಸಂಘ, ವಿದ್ಯಾಭಾರತಿ, ಅಧಿವಕ್ತಾ ಪರಿಷತ್, ಸೇವಾಭಾರತಿ, ಆರೋಗ್ಯಭಾರತಿ ಸೇರಿದಂತೆ ವಿವಿಧ ಸಂಘಟನೆಗಳು, ಗಣೇಶೋತ್ಸವ ಸಮಿತಿಗಳು ಹಾಗೂ ಗೋಶಾಲೆಗಳು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

ಪತ್ರಿಕಾಗೋಷ್ಠಿಯಲ್ಲಿ ಕೊಂಡಣ ಸ್ವಾಮೀಜಿ, ಎಚ್.ಕೆ. ಪುರುಷೋತ್ತಮ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಅಶೋಕ್ ಇಳಂತಿಲ, ಉದಯ್ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular