ಮಂಗಳೂರು : ಕಾವೂರಿನ ಮೂರು ಮನೆಗಳ ಬಾವಿಗಳಲ್ಲಿ ಡೀಸೆಲ್ ರೀತಿಯ ಪೆಟ್ರೋಲಿಯಂ ಅಂಶ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೆಪಿಟಿಸಿಎಲ್ ಸಬ್ಸ್ಟೇಶನ್ ಮುಂಭಾಗದಲ್ಲಿರುವ ಮೂರು ಮನೆಗಳ ಬಾವಿಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಬಾವಿಯ ನೀರನ್ನು ಸಂಪೂರ್ಣ ಖಾಲಿ ಮಾಡಿಸಿದರೂ ಮತ್ತೆ ನೀರಿನ ಮೇಲ್ಭಾಗದಲ್ಲಿ ಡೀಸೆಲ್ನಂತಹ ಪದರ ಕಾಣಿಸುತ್ತಿದೆ ಎಂದು ಮನೆಯ ಮಾಲಕರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಸದಾಶಿವ ಅವರ ಪ್ರಕಾರ, “2022ರಲ್ಲಿ ಬಾವಿ ಕೊರೆದಿದ್ದು, ಇದುವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಕಳೆದ 2-3 ದಿನಗಳಿಂದ ನೀರಿನ ಮೇಲ್ಭಾಗದಲ್ಲಿ ಡೀಸೆಲ್ ಪದರ ಕಾಣಿಸಿಕೊಳ್ಳುತ್ತಿದೆ. ತೆಗೆದು ನೋಡಿದಾಗ ಡೀಸೆಲ್ ವಾಸನೆ ಬರುತ್ತಿದ್ದು, ಕೈಗೆ ಅಂಟುವ ರೀತಿಯ ದ್ರವ ಕಂಡುಬರುತ್ತಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯರು ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಮನಪಾ ಅಧಿಕಾರಿಗಳು ಇದು ಜಿಲ್ಲಾ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯ ಎಂದು ತಿಳಿಸಿದ್ದು, ಬಳಿಕ ಕೂಳೂರು ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಾವಿಯ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಪರೀಕ್ಷಾ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಸಮೀಪದಲ್ಲಿರುವ ಪೆಟ್ರೋಲ್ ಬಂಕ್ನಿಂದ ಇಂಧನ ಸೋರಿಕೆಯಾಗಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಆದರೆ ಪೆಟ್ರೋಲ್ ಬಂಕ್ ಸಿಬ್ಬಂದಿ “ಸೋರಿಕೆ ಆಗಿದ್ದರೆ ಸ್ಟಾಕ್ನಲ್ಲಿ ವ್ಯತ್ಯಾಸ ಕಾಣಿಸಬೇಕಿತ್ತು, ಅಂತಹ ಯಾವುದೇ ಸಮಸ್ಯೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.


