ಮಂಗಳೂರು : ಎಕ್ಕೂರು ರೈಲ್ವೇ ಮೇಲ್ಸೇತುವೆಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿದ್ದಾನೆ.
ಮೃತರನ್ನು ಮೂಲತಃ ಕೇರಳದ ಪಾನತ್ತೂರು ನಿವಾಸಿ ಹಾಗೂ ಪ್ರಸ್ತುತ ಮಂಗಳೂರಿನ ಉರ್ವದ ಚಿಲಿಂಬಿಯ ಮಾನಸ ರೆಸಿಡೆನ್ಸಿಯಲ್ಲಿ ವಾಸವಿದ್ದ ಸುಧೀಶ್ ಸಿ.ಕೆ (26) ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.ಭಾನುವಾರ ಮುಂಜಾನೆ ಕೇರಳದ ಪಾನತ್ತೂರಿನಿಂದ ಮಂಗಳೂರಿನತ್ತ ಬೈಕ್ನಲ್ಲಿ ಬರುತ್ತಿದ್ದ ವೇಳೆ, ಎಕ್ಕೂರು ರೈಲ್ವೇ ಮೇಲ್ಸೇತುವೆಯಲ್ಲಿ ಮುಂದೆ ಸಾಗುತ್ತಿದ್ದ ಈಚರ್ ಟಿಪ್ಪರ್ ಟ್ರಕ್ನ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ವೇಳೆ ಬೈಕ್ ಅತಿವೇಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಸುಧೀಶ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅಪಾರ ಪ್ರಮಾಣದ ರಕ್ತಸ್ರಾವ ಉಂಟಾಗಿದೆ. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ರಸ್ತೆಯ ಮೇಲೆಯೇ ರಕ್ತ ಹರಿದಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


