ಮಂಗಳೂರು : ಅಂತಾರಾಷ್ಟ್ರೀಯ ಕ್ರೀಡಾಪಟು, ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ₹5 ಕೋಟಿ ವಿಶೇಷ ಪ್ರೋತ್ಸಾಹಧನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.

ಭಾರತವನ್ನು ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಪೂವಮ್ಮ ಅವರು ತಮ್ಮ ಕ್ರೀಡಾ ಸಾಧನೆಯ ಮೂಲಕ ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ 400 ಮೀಟರ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು. 2018ರ ಏಷ್ಯನ್ ಗೇಮ್ಸ್ನಲ್ಲಿ ಮಿಶ್ರ 4×400 ಮೀಟರ್ ರಿಲೇಯಲ್ಲಿ ಚಿನ್ನ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿರುವ ಪೂವಮ್ಮ ಅವರಿಗೆ ಅರ್ಜುನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಇದೀಗ 2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನ ಹಾಗೂ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ಮತ್ತೊಮ್ಮೆ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹರೀಶ್ ಪೂಂಜ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇತರೆ ರಾಜ್ಯಗಳಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಕರ್ನಾಟಕ ಸರ್ಕಾರವೂ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕೆ ₹4 ಕೋಟಿ, ಉತ್ತರ ಪ್ರದೇಶದಲ್ಲಿ ಬಹುಪದಕ ವಿಜೇತರಿಗೆ ₹5 ಕೋಟಿವರೆಗೆ ಹಾಗೂ ಮಹಾರಾಷ್ಟ್ರ ಮತ್ತು ಪಂಜಾಬ್ನಲ್ಲಿ ಚಿನ್ನದ ಪದಕ ವಿಜೇತರಿಗೆ ₹1 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೂವಮ್ಮ ಅವರ ಹಲವು ವರ್ಷಗಳ ಕ್ರೀಡಾ ಸೇವೆ, ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಸಾಧನೆ ಹಾಗೂ 2026ರ ಏಷ್ಯನ್ ಗೇಮ್ಸ್ನ ಎರಡು ಪದಕಗಳನ್ನು ಸಮಗ್ರವಾಗಿ ಪರಿಗಣಿಸಿ ₹5 ಕೋಟಿ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಬೇಕು ಎಂದು ಹರೀಶ್ ಪೂಂಜ ಒತ್ತಾಯಿಸಿದ್ದಾರೆ.
ಇಂತಹ ಗೌರವವು ಪೂವಮ್ಮ ಅವರ ಸಾಧನೆಯನ್ನು ಗುರುತಿಸುವುದರ ಜೊತೆಗೆ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

