ಮಂಗಳೂರು : ಪಡೀಲ್‌ನಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದ ಆವರಣದಿಂದ ಅಧಿಕೃತ ಜೀಪ್ ಕಳವು ಮಾಡಿ ಪರಾರಿಯಾಗಿದ್ದ ಕೇರಳ ಮೂಲದ ಯುವಕನನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಕೋಯಿಕ್ಕೋಡ್ ನಿವಾಸಿ ನದೀಮ್ (23) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಸಂಚಾರಿ ದಳದ ಆರ್‌ಎಫ್‌ಒ ಸಂತೋಷ್ ರೈ ಅವರಿಗೆ ಸೇರಿದ ಜೀಪನ್ನು ಚಾಲಕ ಎಂದಿನಂತೆ ವಸತಿಗೃಹದ ಆವರಣದಲ್ಲಿ ನಿಲ್ಲಿಸಿದ್ದರು. ಮುಂಜಾನೆ ವೇಳೆ ವಸತಿಗೃಹದೊಳಗೆ ನುಗ್ಗಿದ ನದೀಮ್, ಜೀಪಿನ ಗಾಜು ಒಡೆದು ಒಳಗಿದ್ದ ಹೆಚ್ಚುವರಿ ಕೀಯನ್ನು ಪಡೆದು ವಾಹನವನ್ನು ಕಳವು ಮಾಡಿದ್ದಾನೆ. ಸೈರನ್ ವೈರ್ ತುಂಡು ಮಾಡಿ ಜೀಪಿನೊಂದಿಗೆ ಪರಾರಿಯಾಗಿದ್ದಾನೆ. ಕೂಳೂರಿನ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಂಡ ಬಳಿಕ ಹಣ ಪಾವತಿಸದೆ ಅಲ್ಲಿಂದಲೂ ಪರಾರಿಯಾಗಿದ್ದನು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ವೇಳೆ ಅದು ಅರಣ್ಯ ಇಲಾಖೆಯ ಜೀಪು ಎಂಬುದು ಗೊತ್ತಾಗಿದೆ.
ಮರುದಿನ ಬೆಳಗ್ಗೆ ಜೀಪು ನಾಪತ್ತೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಆರ್‌ಎಫ್‌ಒ ಸಂತೋಷ್ ರೈ ಜೀಪಿನಲ್ಲಿದ್ದ ಜಿಪಿಎಸ್ ಮೂಲಕ ವಾಹನದ ಚಲನವಲನವನ್ನು ಟ್ರ್ಯಾಕ್ ಮಾಡಿದ್ದಾರೆ. ಆಗ ಜೀಪು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೂಡುಗೋಪಾಡಿ ಪ್ರದೇಶದಲ್ಲಿ ಇರುವುದಾಗಿ ಪತ್ತೆಯಾಗಿದೆ.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಜಿಪಿಎಸ್ ಲೊಕೇಶನ್ ಆಧರಿಸಿ ಜೀಪನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದಾರೆ. ಸಿಕ್ಕಿಬೀಳುವ ಭೀತಿಯಿಂದ ವಾಹನವನ್ನು ರಸ್ತೆಯಲ್ಲೇ ಬಿಟ್ಟು ಓಡಲು ಯತ್ನಿಸಿದ ನದೀಮ್‌ನನ್ನು ಬೆನ್ನಟ್ಟಿ ಬಂಧಿಸಲಾಗಿದೆ.


