Sunday, August 16, 2026
Homeಜಿಲ್ಲೆಮಂಗಳೂರು : 27 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಕಣ್ಮರೆಯಾದ ಮಗ,ಸತೀಶ್‌ನಿಂದ ಸಲೀಂವರೆಗೆ, ಧರ್ಮಸ್ಥಳದಲ್ಲಿ...

ಮಂಗಳೂರು : 27 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಕಣ್ಮರೆಯಾದ ಮಗ,ಸತೀಶ್‌ನಿಂದ ಸಲೀಂವರೆಗೆ, ಧರ್ಮಸ್ಥಳದಲ್ಲಿ ಭಾವನಾತ್ಮಕ ಪುನರ್ಮಿಲನ.

ಧರ್ಮಸ್ಥಳ : “ಸಾಯುವ ಮೊದಲು ನನ್ನ ಮಗನನ್ನು ಒಮ್ಮೆ ನೋಡಬೇಕು…” ಎಂಬ ತಾಯಿಯ 27 ವರ್ಷಗಳ ಹಂಬಲ ಕೊನೆಗೂ ಈಡೇರಿದೆ. ಬಾಲ್ಯದಲ್ಲಿ ಮನೆ ಬಿಟ್ಟು ಕಾಣೆಯಾಗಿದ್ದ ಮಗ, ಬದುಕಿನ ಹಲವು ತಿರುವುಗಳನ್ನು ದಾಟಿ ಮತ್ತೆ ತಾಯಿಯ ಮನೆ ಬಾಗಿಲಿಗೆ ಬಂದು ನಿಂತ ಅಪರೂಪದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಸರ್ಕಸ್ ತಂಡದೊಂದಿಗೆ ಮನೆ ತೊರೆದು ಹೋದ ಸತೀಶ್, ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಅಲೆದಾಡಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದ. ಕಾಲಕ್ರಮೇಣ ಆತ ‘ಸಲೀಂ ಅಬ್ದುಲ್ ಅನ್ಸಾರಿ’ ಎಂಬ ಹೆಸರಿನಲ್ಲಿ ಹೊಸ ಬದುಕು ಕಟ್ಟಿಕೊಂಡಿದ್ದ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದ ಆತ, ತನ್ನ ಹುಟ್ಟೂರು, ಕುಟುಂಬ ಮಾತ್ರವಲ್ಲದೆ ಮಾತೃಭಾಷೆಯನ್ನೂ ಮರೆತಿದ್ದ. ಆದರೆ ವಿಧಿಯಾಟ ಬೇರೆ ಆಗಿತ್ತು. ಧರ್ಮಸ್ಥಳ ಪ್ರವಾಸದ ವೇಳೆ ಹಳೆಯ ಸರ್ಕಸ್ ಮೈದಾನ ಕಣ್ಣಿಗೆ ಬಿದ್ದ ಕ್ಷಣವೇ ಮರೆತುಹೋಗಿದ್ದ ನೆನಪುಗಳು ಜಾಗೃತಗೊಂಡವು. ತನ್ನ ಬಾಲ್ಯದ ಊರು ಇದೇ ಎಂಬ ಅರಿವಾದ ಬಳಿಕ ಸ್ಥಳೀಯರ ಸಹಾಯದಿಂದ ಕುಟುಂಬವನ್ನು ಹುಡುಕಿ ಮನೆಗೆ ಬಂದಿದ್ದಾನೆ.

ಮಗನಿಗೆ ಹಿಂದಿ ಮಾತ್ರ ಗೊತ್ತು, ತಾಯಿಗೆ ಹಿಂದಿ ಗೊತ್ತಿಲ್ಲ. ಆದರೂ 27 ವರ್ಷಗಳ ಬಳಿಕ ನಡೆದ ಆ ತಾಯಿ-ಮಗನ ಭೇಟಿಯಲ್ಲಿ ಭಾಷೆ ಅಡ್ಡಿಯಾಗಲಿಲ್ಲ. ಕಣ್ಣೀರಿನಲ್ಲೇ ಇಬ್ಬರೂ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ವರ್ಷಗಳ ಕಾಲ ದೇವರ ಮೊರೆ ಹೋಗಿ ಮಗನಿಗಾಗಿ ಪ್ರಾರ್ಥಿಸಿದ್ದ ತಾಯಿಗೆ ಕೊನೆಗೂ ಆಕೆಯ ಹರಕೆ ಫಲಿಸಿದ್ದು, ಧರ್ಮಸ್ಥಳ, ಕಟೀಲು ಹಾಗೂ ಪಣೋಲಿಬೈಲು ದೈವಗಳ ಕೃಪೆಯಿಂದ ಮಗ ಮರಳಿ ಬಂದಿದ್ದಾನೆ ಎಂಬ ನಂಬಿಕೆ ಕುಟುಂಬದಲ್ಲಿ ಮನೆ ಮಾಡಿದೆ. ಕೆಲವು ದಿನಗಳ ಕಾಲ ಕುಟುಂಬದೊಂದಿಗೆ ಕಳೆದ ಸತೀಶ್ ಅಲಿಯಾಸ್ ಸಲೀಂ ಮತ್ತೆ ಮಹಾರಾಷ್ಟ್ರಕ್ಕೆ ತೆರಳಿದ್ದರೂ, 27 ವರ್ಷಗಳ ನಿರೀಕ್ಷೆಗೆ ಸಿಕ್ಕ ಈ ಅಂತ್ಯ ಇದೀಗ ಸ್ಥಳೀಯರ ಮನದಲ್ಲೂ ಭಾವನಾತ್ಮಕ ಕಥೆಯಾಗಿ ಉಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular