Monday, February 3, 2025
Flats for sale
Homeರಾಜ್ಯಬೆಂಗಳೂರು : ರಾಜ್ಯದಲ್ಲಿ ಹೆಚ್ಚಿದ ಹದಿಹರೆಯದ ಗರ್ಭಿಣಿಯರ ಸಂಖ್ಯೆ,ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣ,ಲೈಂಗಿಕ ಶಿಕ್ಷಣದ...

ಬೆಂಗಳೂರು : ರಾಜ್ಯದಲ್ಲಿ ಹೆಚ್ಚಿದ ಹದಿಹರೆಯದ ಗರ್ಭಿಣಿಯರ ಸಂಖ್ಯೆ,ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣ,ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆ ಎಂದ ವೈದ್ಯರು…!

ಬೆಂಗಳೂರು : ಪ್ರಪಂಚ ಬೆಳೆಯುತ್ತ ಹೋದಂತೆ ಮನುಷ್ಯನ ಜೀವನದಲ್ಲೂ ಬದಲಾವಣೆ ಆಗುತ್ತದೆಂಬುದಕ್ಕೆ ಈ ಸುದ್ದಿ ಒಂದು ಉದಾಹರಣೆ. ಕರ್ನಾಟಕದಲ್ಲಿ ಹರೆಯದಲ್ಲೇ ಗರ್ಭಿಣಿಯರಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಅತಿ ಹೆಚ್ಚಿನ ಏರಿಕೆಯಾಗಿದೆ.

ಸಮೀಕ್ಷೆಯೊಂದರ ಪ್ರಕಾರ 2021-22 ಮತ್ತು 2023-24ನೇ ಸಾಲಿನಲ್ಲಿ ಬರೋಬ್ಬರಿ 33, 621 ಹರೆಯದವರು ಗರ್ಭಿಣಿಯರಾಗಿರುವುದು ಪತ್ತೆಯಾಗಿದ್ದು ಇದು ಇತ್ತೀಚಿನ ದಶಕಗಳಲ್ಲೇ ಅತಿ ಹೆಚ್ಚೆನ್ನಲಾಗಿದೆ. ಈ ಹದಿಹರೆಯದ ಗರ್ಭಿಣಿಯರ ಸಂಖ್ಯೆಯಲ್ಲಿ ಬೆಂಗಳೂರೇ ರಾಜಧಾನಿ..! ಹೌದು, ಜಿಲ್ಲಾವಾರು ಅಂಕಿ ಅಂಶದ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 4,324 ಹದಿಹರೆಯದ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಆನಂತರದ ಸ್ಥಾನ ವಿಜಯನಗರ (2468), ಬಳ್ಳಾರಿ (2283), ಬೆಳಗಾವಿ (2224) ಮತ್ತು ಮೈಸೂರು ಜಿಲ್ಲೆಯಲ್ಲಿ 1930 ಪ್ರಕರಣಗಳು ಕಂಡುಬಂದಿವೆ. ಈ ಹಿಂದಿನ ವರ್ಷಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ತಾಯ್ತನದ ಪ್ರಮಾಣ ಬಲು ಕಡಿಮೆಯಿತ್ತೆನ್ನಲಾಗಿದೆ. ಆದರೆ, ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ವರ್ಷದಿಂದ ವರ್ಷಕ್ಕೆ ಈ ಹದಿಹರೆಯದ ಗರ್ಭಿಣಿಯರ ಸಂಖ್ಯೆ ಅಧಿಕವಾಗುತ್ತಿರುವುದು ಅನಪೇಕ್ಷಿತ ಬೆಳವಣಿಗೆಯಾಗಿದೆ.

ಈ ಅಂಕಿಅಂಶದ ಏರಿಕೆಗೆ ಹತ್ತಾರು ಕಾರಣಗಳುಂಟು. ಆ ಪೈಕಿ ತಜ್ಞರು ಪ್ರಮುಖವಾಗಿ ಗುರುತಿಸುವುದು ಪೋಕೋ ಕಾಯ್ದೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಹದಿಹರೆಯದ ಗರ್ಭಿಣಿಯರ ಅಂಕಿಅಂಶ ಪತ್ತೆಯಾಗಿದೆ. ಇನ್ನು ಸಾಮಾಜಿಕ ಆರ್ಥಿಕ ಪರಿಸ್ಥಿತಿ, ಅಂತರ್ಜಾಲದ ಸಲೀಸು ಬಳಕೆ, ಸಾಮಾಜಿಕ ಜಾಲತಾಣಗಳ ಪ್ರಭಾವ, ಕೌಟುಂಬಿಕ ಆಸ್ಥಿರತೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆಯೂ ಈ ಹದಿಹರೆಯದ ಗರ್ಭಿಣಿಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಆಧುನಿಕ ಕಾಲದ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಅನಪೇಕ್ಷಿತ ವಿಡಿಯೋಗಳನ್ನು ನೋಡುವುದರಿಂದ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು ಅತಿ ಚಿಕ್ಕವಯಸ್ಸಿಗೇ ದೈಹಿಕ ಸಂಪರ್ಕ ಬೆಳೆಸುವ ವಾಂಛಿ ಹೆಚ್ಚುತ್ತಿರುವುದು ಸಹ ಈ ಹದಿಹರೆಯದ ಗರ್ಭಿಣಿಯರ ಸಂಖ್ಯೆ ಏರಲು ಕಾರಣವಾಗುತ್ತಿದೆ ಎನ್ನುತ್ತಾರೆ ಮನೋಶಾಸ್ತ್ರಜ್ಞರು. ಹದಿಹರೆಯದಲ್ಲೇ ಗರ್ಭಿಣಿಯರಾಗುವ ಪ್ರವೃತ್ತಿ ಬದಲಾವಣೆಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎನ್ನುವುದು ಮನೋಶಾಸ್ತ್ರಜ್ಞರ ಖಚಿತ ಅಭಿಪ್ರಾಯವಾಗಿದ್ದು ಸರ್ಕಾರ ಆ ದೆಸೆಯಲ್ಲಿ ಕಾರ್ಯಪ್ರವೃತ್ತರಾಗುವುದೋ ಇಲ್ಲವೋ ಕಾದುನೋಡಬೇಕಿದೆ.

.

RELATED ARTICLES

LEAVE A REPLY

Please enter your comment!
Please enter your name here

Most Popular