ಬೆಂಗಳೂರು : ಇನ್ನು ಮುಂದೆ ರಾಜ್ಯದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದ್ದು ಯಾವುದಾದರೂ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದರೆ 24 ಗಂಟೆ ಒಳಗೆ ವ್ಯವಸ್ಥೆ ಮಾಡಲು ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಕುಡಿಯುವ ನೀರು, ಮೇವು ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮೇವು ಮತ್ತು ನೀರಿನ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾರ್ಚ್, ಏಪ್ರಿಲ್ನಲ್ಲಿ ಹಳ್ಳಿ ಹಳ್ಳಿಗಳಲ್ಲಿ ನೀರಿಗೆ ತತ್ವಾರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಇರುವ ಕಡೆಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ನಿರ್ಧಾರಕ್ಕೆ ಬರಲಾಗಿದೆ. ಮೇವು ಹಾಗೂ ನೀರಿನ ಕೊರತೆ ಇನ್ನಷ್ಟು ಜಾಸ್ತಿಯಾಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ಸಿಇಒಗಳು ಹಾಗೂ ಎಸಿಗಳ ಜತೆ ಸಭೆ ಮಾಡಿದ್ದೇನೆ. ಖಾಸಗಿ ಬೋರ್ವೆಲ್ ಮೂಲಕ ನೀರು ಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಬಿಂದಿಗೆಯಲ್ಲಿ ನೀರು ಕೊಟ್ಟರೆ ಯಾವುದಕ್ಕೂ ಸಾಲುವುದಿಲ್ಲ. ಇರುವ ಖಾಸಗಿ ಬೋರ್ವೆಲ್ ಮೂಲಕ ನೀರು ಒದಗಿಸುವಂತೆ ಸೂಚಿಸಿದ್ದೇವೆ. ಈಗಾಗಲೇ 116 ಹಳ್ಳಿಯಲ್ಲಿ 175 ಟ್ರಿಪ್ ನೀರು ಕೊಡುತ್ತಿದ್ದೇವೆ. 382 ಹಳ್ಳಿಗಳಲ್ಲಿ ಬಾಡಿಗೆ ಬೋರ್ವೆಲ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಈಗಾಗಲೇ 7080 ಖಾಸಗಿ ಬೋರ್ವೆಲ್ಗಳನ್ನು ನೋಡಿದ್ದೇವೆ. ಮೇವು ಖರೀದಿಗೆ ಟೆಂಡರ್ ಆಗಿದೆ. ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ. ನಗರ ಪ್ರದೇಶಗಳ 52 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇದೆ. 1272 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಆಗಬಾರದು. 7200 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಹುದು. ಹೀಗಾಗಿ ಹೋಬಳಿ ಮಟ್ಟದಲ್ಲಿ ಗೋಶಾಲೆ ಇಲ್ಲವೇ ಮೇವಿನ ಬ್ಯಾಂಕ್ ತೆರೆಯಲು ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.


