ಬೆಂಗಳೂರು : ಅಪರಿಚಿತ ವೃದ್ಧೆಯೊಬ್ಬಳನ್ನು ಕ್ರೂರವಾಗಿ ಹತ್ಯೆಗೈದು ನಂತರ ಪೆಟ್ರೋಲ್ ಸುರಿದು ಸುಟ್ಟ ಘಟನೆ ಕಗ್ಗಲೀಪುರ ರೋಡ್ ಸಮೀಪದ ಬಿಲ್ವಾರ ಪ್ರದೇಶದಲ್ಲಿ ನಡೆದಿದೆ.
ಸುಮಾರು 50ರಿಂದ 60 ವರ್ಷದೊಳಗಿನ ವಯಸ್ಸಿನ ವೃದ್ಧೆಯ ಅರೆಬೆಂದ ಸ್ಥಿತಿಯ ಮೃತದೇಹ ಪತ್ತೆಯಾಗಿದ್ದು, ಬೆಳಿಗ್ಗೆ 9.30ರ ವೇಳೆಗೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರ್ಘಟ್ಟ ಪೊಲೀಸ್ ಸ್ಟೇಷನ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ವೃದ್ಧೆಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆಸ್ತಿ ವಿವಾದವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


