ಬೆಂಗಳೂರು : ಜಾತ್ಯತೀತ ಜನತಾದಳದ ಹಲವು ಶಾಸಕರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಜಾತ್ಯತೀತ ಜನತಾದಳದ `ದಳಪತಿ’ ಗಳ ಬಗ್ಗೆ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿರುವ ದಳದ ಶಾಸಕರು ಸಾಮೂಹಿಕವಾಗಿ ಪಕ್ಷಾಂತರ ಮಾಡುವರೆಂಬ ಮಾತುಗಳೂ ಕೇಳಿಬಂದಿದ್ದವು.
ರಾಜ್ಯದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ರಾಜಕೀಯ ಶಕ್ತಿಯನ್ನು ಕುಂದಿಸಬೇಕೆಂದೇ ಪಣ ತೊಟ್ಟಿದ್ದಾರೆನ್ನಲಾದ ಕಾಂಗ್ರೆಸ್ ನಾಯಕರು ದಳ ಶಾಸಕರನ್ನು ಸೆಳೆಯುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆಂದು ಗೊತ್ತಾಗಿದೆ. ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿಯನ್ನು ಸಮೀಪದ ಸ್ಪರ್ಧಿಯಾಗಿ ಸೋಲಿಸಿರುವ ಜೆಡಿಎಸ್ ಶಾಸಕರನ್ನೇ ಗುರಿಯಾಗಿಸಿಕೊಂಡು ಈ `ಆಪರೇಷನ್ ಹಸ್ತ’ದ ಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.
ಹನೂರಿನ ಮಂಜುನಾಥ್, ಕರೆಮ್ಮ ಶಾರದಾನಾಯಕ್, ಸಮೃದ್ಧಿ ಮಂಜುನಾಥ್ ಮುಂತಾದವರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆನ್ನಲಾಗಿದ್ದು ಕಾಂಗ್ರೆಸ್ ಮತಗಳು ಮತ್ತು ಜೆಡಿಎಸ್ ಅಭ್ಯರ್ಥಿಯ ಮತಗಳು ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.