Wednesday, August 12, 2026
Homeರಾಜ್ಯಬೆಂಗಳೂರು : "ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್? "19 ಸಾವಿರ ಮಹಿಳೆಯರಿಗೆ ಒಂದೇ ಬ್ಯಾಂಕ್ ಖಾತೆ,ಸಿಎಜಿ ವರದಿಯಲ್ಲಿ...

ಬೆಂಗಳೂರು : “ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್? “19 ಸಾವಿರ ಮಹಿಳೆಯರಿಗೆ ಒಂದೇ ಬ್ಯಾಂಕ್ ಖಾತೆ,ಸಿಎಜಿ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳು !

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಹಾಲೇಖಪಾಲರ (CAG) ಡೇಟಾ ವಿಶ್ಲೇಷಣೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ವರದಿಯ ಪ್ರಕಾರ, 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬಳಸಿರುವುದು ಪತ್ತೆಯಾಗಿದೆ. ಇದರಿಂದ ಯೋಜನೆಯಡಿ ಬಿಡುಗಡೆಯಾಗುತ್ತಿರುವ ಹಣದ ಪಾವತಿ ಮತ್ತು ಹಂಚಿಕೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಮೂಡಿವೆ.

ಇದರ ಜೊತೆಗೆ, 23,262 ಖಾತೆಗಳಿಗೆ ಬ್ಯಾಂಕ್ ಖಾತೆ ವಿವರಗಳೇ ಇಲ್ಲದೆ ಸುಮಾರು 46.52 ಕೋಟಿ ರೂಪಾಯಿ ಪಾವತಿಯಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಾಲೇಖಪಾಲರ ಕಚೇರಿ ಸ್ಪಷ್ಟನೆ ಕೋರಿದೆ.

ಡೇಟಾ ವಿಶ್ಲೇಷಣೆಯಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದ್ದು, ಕೆಲವು ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿರುವುದು ಕಂಡುಬಂದಿದೆ. ಈ ರೀತಿಯ 10,06,308 ಖಾತೆ ಬದಲಾವಣೆ ದಾಖಲೆಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.

ಯೋಜನೆಯಡಿ ಇದುವರೆಗೆ 30 ಕಂತುಗಳನ್ನು ಪಾವತಿಸಲಾಗಿದ್ದು, ಕೆಲವು ನಿರ್ದಿಷ್ಟ ಅವಧಿಗಳಲ್ಲಿ ಸುಮಾರು 1.80 ಕೋಟಿ ರೂಪಾಯಿಯನ್ನು 8,995 ಖಾತೆಗಳಿಗೆ ಪುನಃ ಪಾವತಿ ಮಾಡಲಾಗಿದೆ ಎನ್ನಲಾಗಿದೆ.

ಮಹಾಲೇಖಪಾಲರ ಕಚೇರಿಯಿಂದ ಹಲವು ಬಾರಿ ಮಾಹಿತಿ ಕೋರಿದರೂ ಅಗತ್ಯ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಕ್ಷಣವೇ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದ್ದಾರೆ.

2023-24ರಲ್ಲಿ 18,103.88 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಆರಂಭವಾದ ಗೃಹಲಕ್ಷ್ಮಿ ಯೋಜನೆಯ ವೆಚ್ಚವು ಫಲಾನುಭವಿಗಳ ಸಂಖ್ಯೆ ಹೆಚ್ಚಿದಂತೆ ಏರಿಕೆಯಾಗುತ್ತಿದ್ದು, ಮುಂದಿನ ಕಂತುಗಳ ಪಾವತಿಯೊಂದಿಗೆ ಒಟ್ಟು ವೆಚ್ಚ 75 ಸಾವಿರ ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆದರೆ ಈ ಎಲ್ಲಾ ಅಂಶಗಳ ಕುರಿತು ಸಂಬಂಧಿತ ಇಲಾಖೆಯ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದ್ದು, ತನಿಖೆ ಮತ್ತು ಪರಿಶೀಲನೆ ಬಳಿಕವೇ ಅಂತಿಮ ಸತ್ಯಾಂಶ ಹೊರಬೀಳಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular