Wednesday, October 28, 2026
Homeರಾಜ್ಯಬೆಂಗಳೂರು : ಎಸ್‌ಐಆರ್‌ನಲ್ಲಿ ಪಾಕ್ ಪ್ರಜೆ ಸೇರಿ 716 ವಿದೇಶಿಗರು ಪತ್ತೆ ; ಮತದಾರರ ಪಟ್ಟಿಯಿಂದ...

ಬೆಂಗಳೂರು : ಎಸ್‌ಐಆರ್‌ನಲ್ಲಿ ಪಾಕ್ ಪ್ರಜೆ ಸೇರಿ 716 ವಿದೇಶಿಗರು ಪತ್ತೆ ; ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್!

ಬೆಂಗಳೂರು : ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವೇಳೆ ಓರ್ವ ಪಾಕಿಸ್ತಾನಿ ಪ್ರಜೆ ಸೇರಿದಂತೆ ಒಟ್ಟು 716 ವಿದೇಶಿ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಬಿಬಿಎಂಪಿ ಉತ್ತರ ಜಿಲ್ಲೆ ಒಂದರಲ್ಲೇ 583 ವಿದೇಶಿ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ. ಇವರಲ್ಲಿ 545 ಮಂದಿ ನೇಪಾಳದವರು, 24 ಮಂದಿ ಅಮೆರಿಕದವರು, 8 ಮಂದಿ ಆಸ್ಟ್ರೇಲಿಯಾದವರು, ಇಬ್ಬರು ಕೆನಡಾದವರು ಹಾಗೂ ಮೂವರು ಯುಎಇ ಪ್ರಜೆಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪತ್ತೆ

ಉಳಿದಂತೆ ದಕ್ಷಿಣ ಕನ್ನಡ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಹಾಗೂ ಹಾಸನ ಜಿಲ್ಲೆಗಳಲ್ಲೂ ವಿವಿಧ ದೇಶಗಳ ಪ್ರಜೆಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದವು ಎನ್ನಲಾಗಿದೆ. ನೇಪಾಳ, ಬ್ರಿಟನ್, ನಾರ್ವೆ, ಐರ್ಲೆಂಡ್, ಬಾಂಗ್ಲಾದೇಶ, ಫ್ರಾನ್ಸ್ ಮತ್ತು ನೆದರ್ಲೆಂಡ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳ ಹೆಸರುಗಳು ಪಟ್ಟಿಯಲ್ಲಿದ್ದವು ಎಂದು ವರದಿಯಾಗಿದೆ.

ಎನ್ಯುಮೆರೇಷನ್ ಫಾರ್ಮ್ ವೇಳೆ ಮಾಹಿತಿ ಕೊರತೆ

ಎಸ್‌ಐಆರ್‌ಗೂ ಮುನ್ನ ಪ್ರಕಟವಾಗಿದ್ದ ರಾಜ್ಯದ ಮತದಾರರ ಪಟ್ಟಿಯಲ್ಲಿ ಈ ಹೆಸರುಗಳು ಇದ್ದವು ಎನ್ನಲಾಗಿದೆ. ಸಂಬಂಧಿತ ವ್ಯಕ್ತಿಗಳು ಭಾರತೀಯ ಗುರುತಿನ ಚೀಟಿಗಳನ್ನೂ ಹೊಂದಿದ್ದರು ಎಂದು ವರದಿ ತಿಳಿಸಿದೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎನ್ಯುಮೆರೇಷನ್ ಫಾರ್ಮ್ ಭರ್ತಿ ಮಾಡುವ ಸಂದರ್ಭದಲ್ಲಿ ಪೋಷಕರ ಮಾಹಿತಿಯನ್ನು ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಈ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಕಾನೂನು ಕ್ರಮಕ್ಕೆ ಚಿಂತನೆ?

ವಿದೇಶಿ ಪ್ರಜೆಗಳ ಹೆಸರುಗಳು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular