ಬಳ್ಳಾರಿ : ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಜೆ.ಎನ್.ಗಣೇಶ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬೆಳೆ ಸಮೀಕ್ಷೆ ಶುಕ್ರವಾರ ಸಂಜೆ ನಡೆಸಿದರು.ಇಲ್ಲಿನ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆ ಬದಿಯಲ್ಲಿರುವ ರೈತರ ಹೊಲಗಳಿಗೆ ಭೇಟಿ ನೀಡಿ, ಬರ ಅಧ್ಯಯನ ಮಾಡುವ ಮೂಲಕ ಪರಿಶೀಲಿಸಿದರು.
ಮಳೆ ಕೈಕೊಟ್ಟ ಹಿನ್ನಲೆ ಬರಗಾಲದ ಛಾಯೆಗೆ ಬೆಳೆಹಾನಿಯಾದ ಬಣಗಾರ್ ನಾಗೇಶಗೆ ಸೇರಿದ ತೊಗರಿ ಬೆಳೆ, ಕೆ.ಮಾಳಮ್ಮಗೆ ಸೇರಿದ ಸಜ್ಜೆ, ಗಾಳಿ ಮಲ್ಲಯ್ಯ ಎಂಬುವರಿಗೆ ಸೇರಿದ ಔಡಲ ಬೆಳೆಯ ಹೊಲಗಳಿಗೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಭೇಟಿ, ಬರ ಸಮೀಕ್ಷೆ ಮಾಡಿದರು.
ನಂತರ ಸಚಿವ ಬಿ.ನಾಗೇಂದ್ರ ಮಾತನಾಡಿ, ಕುರುಗೋಡು ತಾಲೂಕು ವ್ಯಾಪ್ತಿಯ ರೈತರ ಹೊಲದಲ್ಲಿ ಬೆಳೆದಿದ್ದ ಸಜ್ಜೆ, ಹತ್ತಿ, ತೊಗರಿ ಬೆಳೆಗಳು ಶೇ.೧೦೦ ರಷ್ಡು ಹಾನಿಯಾಗಿರುವುದು ಕಂಡು ಬಂದಿದೆ. ಹೀಗಾಗಿ ಬರಗಾಲದ ಪರಿಹಾರವನ್ನು ಸರ್ಕಾರ ರೈತರಿಗೆ ಒದಗಿರುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲುತ್ತದೆ. ರೈತರು ಧೃತಿಗೆಡದೆ ಬೆಳೆ ಪರಿಹಾರ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು.
ಹೈಡ್ರಾಮ: ಇಲ್ಲಿನ ಬೆಳೆ ಸಮೀಕ್ಷೆ ನಡೆಸುವ ವೇಳೆ ಕೆಲವರು ಸಜ್ಜೆ ಹೊಲದಲ್ಲಿರುವ ಕುರಿಗಳ ಮಧ್ಯದಲ್ಲಿ ಸಚಿವರನ್ನು ನಿಲ್ಲಿಸಿ, ಪೋಟೋಗೆ ಫೋಜ್ ನೀಡುವಂತಹ ಹೈಡ್ರಾಮ ಮಾಡಿದ್ರಾ ಎಂಬ ಪ್ರಶ್ನೆ ಮೂಡುವಂತಾಗಿತ್ತು. ಹಾನಿಯಾದ ಹೊಲಗಳಿಗೆ ಭೇಟಿ ನೀಡಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಸಮೀಕ್ಷೆ ನಡೆಸುವಂತೆ ಬ್ರಾಸವಾಗಿತ್ತು.
ಮೆಣಸಿನಕಾಯಿ ಬೆಳೆಗೆ ನೀರು ಹರಿಸಲು ನಿರಾಕರಣೆ : ಇಲ್ಲಿನ ಬರ ಸಮೀಕ್ಷೆ ನಡೆಸುತ್ತಿದ್ದ ವೇಳೆ ರೈತರೊಬ್ಬರು ಮೆಣಸಿನಕಾಯಿ ಬೆಳೆಗೆ ನೀರು ಬಿಡಿಸಿ, ಬೆಳೆಗಳನ್ನು ಉಳಿಸುವಂತೆ ಸಚಿವರಿಗೆ ಮನವಿ ಮಾಡಿದರು. ನಂತರ ಮಧ್ಯಸ್ಥಿಕೆ ವಹಿಸಿದ ಶಾಸಕ ಗಣೇಶ ಅವರು ನೀರು ಕೊಡಿಸಲು ನಿರಾಕರಣೆಯ ಮಾತುಗಳನ್ನಾಡಿದ್ದಾರೆ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸುಂಕನೂರ್, ಬಳ್ಳಾರಿ ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ತಹಶೀಲ್ದಾರ್ ರಾಘವೇಂದ್ರ, ತಾಪಂ ಇಒ ಕೆ.ವಿ.ನಿರ್ಮಲ, ಸಹಾಯಕ ಕೃಷಿ ಅಧಿಕಾರಿಗಳಾದ ದೇವರಾಜ, ಶ್ರೀಧರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


