ನವದೆಹಲಿ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ವಾಗಿ ತಿರುಗೇಟು ನೀಡಿದೆ.
ಭಾರತದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಪ್ರಾದೇಶಿಕ ಶಾಂತಿಗೆ ಅಪಾಯವನ್ನು ಉಂಟುಮಾಡುತ್ತದೆ ಎAದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದರು. ಇದಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್ನ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಇಂದು ತಿರುಗೇಟು ನೀಡಿದರು.
ಭಯೋತ್ಪಾದನೆ, ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಅಂತರರಾಷ್ಟ್ರೀಯ ಅಪರಾಧಗಳಿಗೆ ಜಾಗತಿಕ ಕುಖ್ಯಾತಿಯನ್ನು ಹೊಂದಿರುವ ಮತ್ತು ಸೇನೆಯಿಂದ ಆಡಳಿತ ನಡೆಸಲ್ಪಡುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವ ಧೈರ್ಯವನ್ನು ಪ್ರದರ್ಶಿಸಿದೆ.
ಪಾಕಿಸ್ತಾನದ ಪ್ರಧಾನಿ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಪ್ರತಿಯಾಗಿ ಈ ಹೇಳಿಕೆ ನೀಡುತ್ತಿದ್ದೇನೆ, ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ’ ಎಂದು ಭಾವಿಕಾ ಮಂಗಳಾನಂದನ್ ಹೇಳಿದರು. ಸುದೀರ್ಘ ಕಾಲದಿಂದ ನೆರೆ ದೇಶಗಳ ವಿರುದ್ಧ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಜಗತ್ತಿಗೇ ತಿಳಿದಿರುವ ವಿಚಾರ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಂಸತ್ನ ಮೇಲೆ, ವಾಣಿಜ್ಯ ನಗರಿ ಮುಂಬೈಯ ಮೇಲೆ, ಧಾರ್ಮಿಕ ಸ್ಥಳಗಳು ಹಾಗೂ ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಂಥ ದೇಶ ಹಿಂಸಾಚಾರದ ವಿರುದ್ಧ ಮಾತನಾಡುವುದೇ ಒಂದು ವಿರೋಧಾಭಾಸ. ಸರಿಯಾಗಿ ಚುನಾವಣೆ ನಡೆಸಿದ ಇತಿಹಾಸವನ್ನೇ ಹೊಂದಿರದ, ಸೇನಾ ಆಡಳಿತ ಹೊಂದಿರುವ ದೇಶ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಿರುವ ನೆರೆ ದೇಶದ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸುವುದು ಹಾಸ್ಯಾಸ್ಪದ ಎಂದು ಅವರು ತಿರುಗೇಟು ನೀಡಿದರು.