ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ವಿಸ್ತರಿತ ಅಧಿಕಾರಾವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದ್ದು, ಅವರಿಗೆ ಮತ್ತೊಮ್ಮೆ ಅವಧಿ ವಿಸ್ತರಣೆ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (Centre of Excellence) ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಅಜಿತ್ ಅಗರ್ಕರ್ ಅವರ ಮೂಲ ಅಧಿಕಾರಾವಧಿ ಜೂನ್ನಲ್ಲೇ ಪೂರ್ಣಗೊಂಡಿದ್ದರೂ, ಬಿಸಿಸಿಐ ಮೂರು ತಿಂಗಳ ವಿಸ್ತರಣೆ ನೀಡಿತ್ತು. ಆರಂಭದಲ್ಲಿ ಅವರು 2027ರ ಏಕದಿನ ವಿಶ್ವಕಪ್ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಭವಿಷ್ಯ ಪ್ರಶ್ನಾರ್ಹವಾಗಿದೆ.
ಮೂಲಗಳ ಪ್ರಕಾರ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸದಸ್ಯರು ವಿವಿಎಸ್ ಲಕ್ಷ್ಮಣ್ ಅವರ ಅನುಭವ ಮತ್ತು ಅಭಿಪ್ರಾಯಕ್ಕೆ ಹೆಚ್ಚಿನ ಗೌರವ ನೀಡುತ್ತಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಕೂಡ ಅವರ ಪರವಾಗಿ ಕೆಲಸ ಮಾಡುತ್ತಿದೆ.
ಮುಖ್ಯ ಆಯ್ಕೆಗಾರರ ನೇಮಕಾತಿ ಕುರಿತು ಅಂತಿಮ ನಿರ್ಧಾರವನ್ನು ಸೆಪ್ಟೆಂಬರ್ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ನಿವೃತ್ತಿ ಕುರಿತು ಹರಿದಾಡಿದ ವದಂತಿಗಳು ಹಾಗೂ ಬಳಿಕ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೀಡಿದ ಸ್ಪಷ್ಟನೆ, ಈ ವಿಚಾರವನ್ನು ಮತ್ತಷ್ಟು ಚರ್ಚೆಗೆ ಗ್ರಾಸವಾಗುವಂತೆ ಮಾಡಿತ್ತು. ನಂತರ ಲಾರ್ಡ್ಸ್ನಲ್ಲಿ ರೋಹಿತ್ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಅಜಿತ್ ಅಗರ್ಕರ್ ಮುಖ್ಯ ಆಯ್ಕೆಗಾರರಾಗಿದ್ದ ಅವಧಿಯಲ್ಲಿ ಭಾರತ ತಂಡ ನಾಲ್ಕು ಐಸಿಸಿ ಟೂರ್ನಿಗಳ ಫೈನಲ್ ಪ್ರವೇಶಿಸಿ, ಮೂರು ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಾಧನೆಗಳಿದ್ದರೂ ಅವರ ಮುಂದಿನ ಅವಧಿ ಕುರಿತು ಅಂತಿಮ ತೀರ್ಮಾನ ಸೆಪ್ಟೆಂಬರ್ ಸಭೆಯಲ್ಲಿ ಹೊರಬೀಳುವ ನಿರೀಕ್ಷೆಯಿದೆ.

