Tuesday, October 27, 2026
Homeರಾಜಕೀಯನವದೆಹಲಿ : ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡ: ದೇಶಾದ್ಯಂತ ಪ್ರತಿಭಟನೆ, ಕ್ಷಮೆಯಾಚನೆಗೆ ಆಗ್ರಹ…!

ನವದೆಹಲಿ : ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡ: ದೇಶಾದ್ಯಂತ ಪ್ರತಿಭಟನೆ, ಕ್ಷಮೆಯಾಚನೆಗೆ ಆಗ್ರಹ…!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ‘ಮೋದಿ ಕಾ ಬಾಪ್ ಭೀ ಜಾಯೇಗಾ’ ಎಂಬ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕು ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಬಿಹಾರ, ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಖರ್ಗೆ ಅವರ ಪ್ರತಿಕೃತಿ ಹಾಗೂ ಪೋಸ್ಟರ್‌ಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖರ್ಗೆ ನಿವಾಸಕ್ಕೆ ಮುತ್ತಿಗೆ ಯತ್ನ

ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಸ್ತೆಗಿಳಿದು ಖರ್ಗೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಗುವಾಹಟಿಯಲ್ಲೂ ಬಿಜೆಪಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಓರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರ ಆಕ್ರೋಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವಮಾನಕಾರಿ ಭಾಷೆ ಬಳಸುವುದು ಕಾಂಗ್ರೆಸ್ ಸಂಪ್ರದಾಯದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಸತತ ಸೋಲುಗಳಿಂದ ಕಾಂಗ್ರೆಸ್ ಹತಾಶೆಗೊಂಡಿದ್ದು, ಅದರ ಪರಿಣಾಮವಾಗಿ ಪಕ್ಷದ ನಾಯಕರು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಂತಹ ಭಾಷೆ ಬಳಸಿರುವುದು ಆಘಾತಕಾರಿ. ಈ ಹೇಳಿಕೆಯು ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ಖರ್ಗೆ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಟನಾ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ

ಬಿಹಾರದ ಪಟನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಅಧಿಕಾರ ಬಿಟ್ಟು ಹೋಗುವುದಿಲ್ಲ ಎಂಬ ಸಭಿಕರೊಬ್ಬರ ಮಾತಿಗೆ ಪ್ರತಿಕ್ರಿಯಿಸಿದ್ದ ಖರ್ಗೆ, ‘ಮೋದಿ ಕಾ ಬಾಪ್ ಭೀ ಜಾಯೇಗಾ’ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಖರ್ಗೆ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ

ಇನ್ನೊಂದೆಡೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದು ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಪ್ರಯೋಗವಾಗಿದ್ದು, ಯಾರ ತಂದೆಯನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲ. ಈ ವಿಚಾರವನ್ನು ದೊಡ್ಡ ವಿವಾದವನ್ನಾಗಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಪೋಷಕರನ್ನು ಕಾಂಗ್ರೆಸ್ ರಾಜಕೀಯಕ್ಕೆ ಎಳೆದು ತಂದಿಲ್ಲ ಎಂದು ಕಾಂಗ್ರೆಸ್ ವಾದಿಸಿದೆ. ಪ್ರಧಾನಿ ಮೋದಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ‘ಮೊಸಳೆ ಕಣ್ಣೀರು’ ಸುರಿಸಿ ಮತಯಾಚಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತಿದ್ದರೆ, ಕಾಂಗ್ರೆಸ್ ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಬೆಳವಣಿಗೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular