ನವದೆಹಲಿ : ವಾಹನಗಳ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ 2029ರ ಏಪ್ರಿಲ್ನಿಂದ BS-7 ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರಂತೆ, ಹೊಸ ವಾಹನಗಳಲ್ಲಿ ಹಂತ ಹಂತವಾಗಿ BS-7 ಮಾನದಂಡಗಳಿಗೆ ಅನುಗುಣವಾದ ಎಂಜಿನ್ ಅಳವಡಿಕೆ ಕಡ್ಡಾಯವಾಗಲಿದೆ.
ಪ್ರಸ್ತುತ ಜಾರಿಯಲ್ಲಿರುವ BS-6 ಮಾನದಂಡಗಳನ್ನು 2020ರ ಏಪ್ರಿಲ್ನಲ್ಲಿ ಜಾರಿಗೆ ತರಲಾಗಿತ್ತು. ಇದೀಗ ಯೂರೋ-7 ಮಾನದಂಡಗಳಿಗೆ ಅನುಗುಣವಾಗಿ BS-7 ಮಾನದಂಡಗಳನ್ನು ರೂಪಿಸಲಾಗುತ್ತಿದ್ದು, ವಾಹನಗಳಿಂದ ಹೊರಸೂಸುವ ಸಾರಜನಕ ಆಕ್ಸೈಡ್ಗಳು, ಹೈಡ್ರೋಕಾರ್ಬನ್ಗಳು ಹಾಗೂ ಸೂಕ್ಷ್ಮ ಕಣಗಳ ಪ್ರಮಾಣಕ್ಕೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸುವ ಉದ್ದೇಶ ಹೊಂದಲಾಗಿದೆ.
ಮೊದಲ ಹಂತದಲ್ಲಿ ಕಾರುಗಳಿಗೆ ಅನ್ವಯ
ವರದಿಯ ಪ್ರಕಾರ, 2029ರ ಏಪ್ರಿಲ್ನಿಂದ ಮಾರುಕಟ್ಟೆಗೆ ಬರುವ ಹೊಸ ಕಾರುಗಳಲ್ಲಿ BS-7 ಮಾನದಂಡಗಳನ್ನು ಅಳವಡಿಸಲಾಗುತ್ತದೆ. 2030ರಿಂದ ಸಣ್ಣ ಸರಕು ಸಾಗಣೆ ವಾಹನಗಳು ಮತ್ತು ಪಿಕಪ್ ಕ್ಯಾಬ್ಗಳಿಗೂ ಈ ಮಾನದಂಡ ಅನ್ವಯವಾಗಲಿದೆ.
ಇನ್ನು 2031ರಿಂದ ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳಲ್ಲಿ BS-7 ಮಾನದಂಡಗಳನ್ನು ಕಡ್ಡಾಯಗೊಳಿಸುವ ಯೋಜನೆ ಇದೆ. ದ್ವಿಚಕ್ರ ವಾಹನಗಳಿಗೆ ಈ ನಿಯಮವನ್ನು ಯಾವಾಗಿನಿಂದ ಅನ್ವಯಿಸಲಾಗುತ್ತದೆ ಎಂಬ ಬಗ್ಗೆ ಇನ್ನೂ ನಿರ್ಧಾರ ಪ್ರಕಟವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೊಸ ಮಾನದಂಡಗಳ ಜಾರಿಯಿಂದ ವಾಹನಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ, ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

