ದುಬೈ/ಟೆಹ್ರಾನ್ : ಕಳೆದ ಎರಡು ದಿನಗಳಿಂದ ಇರಾನ್‌ನ ವಿವಿಧ ಸೇನಾ ಗುರಿಗಳ ಮೇಲೆ ನಡೆಸಿದ್ದ ಭಾರೀ ವೈಮಾನಿಕ ದಾಳಿಯನ್ನು ಪೂರ್ಣಗೊಳಿಸಿ, ಸದ್ಯಕ್ಕೆ ದಾಳಿ ನಿಲ್ಲಿಸಿರುವುದಾಗಿ ಅಮೆರಿಕದ ಕೇಂದ್ರ ಕಮಾಂಡ್ (CENTCOM) ತಿಳಿಸಿದೆ. ಬುಧವಾರ ಸುಮಾರು 80 ಹಾಗೂ ಗುರುವಾರ 90ಕ್ಕೂ ಹೆಚ್ಚು ಗುರಿಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು ಎಂದು ವರದಿಯಾಗಿದೆ.
ದಾಳಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡಿದ್ದು, ಬ್ಯಾರೆಲ್‌ಗೆ 80 ಡಾಲರ್ ತಲುಪಿದ್ದ ಕಚ್ಚಾ ತೈಲದ ಬೆಲೆ 76 ಡಾಲರ್‌ಗೆ ಇಳಿಕೆಯಾಗಿದೆ. ಆದರೆ ಇರಾನ್‌ನ ದಕ್ಷಿಣ ಭಾಗದಲ್ಲಿ, ಬುಶೆಹರ್ ಪರಮಾಣು ಸ್ಥಾವರದ ಸಮೀಪ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಿಗೂಢ ಸ್ಫೋಟಗಳು ಮತ್ತು ಸಣ್ಣಪುಟ್ಟ ವೈಮಾನಿಕ ದಾಳಿಗಳ ವರದಿಗಳು ಬಂದಿವೆ. ಈ ದಾಳಿಗಳಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
‘ಷರತ್ತು ಹೇರಿದರೆ ಕದನ’ – ಟ್ರಂಪ್ ಎಚ್ಚರಿಕೆ
ಈ ಬೆಳವಣಿಗೆಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಮಾತುಕತೆ ಮುಂದುವರಿಸಲು ಮನವಿ ಮಾಡಿದೆ. ನಾವು ಒಪ್ಪಿದ್ದೇವೆ. ಆದರೆ ಯಾವುದೇ ಷರತ್ತುಗಳನ್ನು ವಿಧಿಸಬಾರದು. ಷರತ್ತು ಹೇರಿದರೆ ಕದನ ವಿರಾಮ ಮುಂದುವರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಟ್ರಂಪ್, ಅಮೆರಿಕ-ಇರಾನ್ ಕದನ ವಿರಾಮ “ಅಂತ್ಯಗೊಂಡಿದೆ”, ಆದರೆ ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ಇನ್ನೂ ತೆರೆದಿದೆ ಎಂದು ಹೇಳಿದ್ದಾರೆ.


