ಚಿತ್ರದುರ್ಗ : ದಿವಂಗತ ಸಚಿವ ಡಿ. ಸುಧಾಕರ್ ಅವರ ನಿವಾಸದ ಸಮೀಪ ವಾಮಾಚಾರಕ್ಕೆ ಬಳಸಲಾಗುತ್ತದೆ ಎನ್ನಲಾದ ವಸ್ತುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಡಿ. ಸುಧಾಕರ್ ನಿವಾಸದ ಮುಂಭಾಗ ಹಾಗೂ ಮನೆ ಸಮೀಪದ ಬೋರ್ವೆಲ್ ಬಳಿ ತಾಮ್ರದ ತಗಡು, ನಿಂಬೆಹಣ್ಣು, ತಾಯತ, ಮಟನ್ ಪೀಸ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ವಸ್ತುಗಳನ್ನು ಡಿ. ಸುಧಾಕರ್ ಅವರ ಆಪ್ತ ಚಂದ್ರು ಪತ್ತೆಹಚ್ಚಿದ್ದು, ಬಳಿಕ ಅವುಗಳನ್ನು ಸುಟ್ಟು ಹಾಕಿರುವ ದೃಶ್ಯಗಳು ವೈರಲ್ ಆಗಿವೆ.
“ವಾಮಾಚಾರ ನಡೆದಿತ್ತೇ?” ಎಂಬ ಚರ್ಚೆ : ವಿಡಿಯೋ ವೈರಲ್ ಆದ ಬಳಿಕ, “ವಿರೋಧಿಗಳ ವಾಮಾಚಾರಕ್ಕೆ ಡಿ. ಸುಧಾಕರ್ ಬಲಿಯಾದರೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆಯೇ ಈ ವಸ್ತುಗಳು ಪತ್ತೆಯಾಗಿದ್ದವು ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ಪೊಲೀಸ್ ದೃಢೀಕರಣ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಆಧರಿಸಿ ಹಲವು ಊಹಾಪೋಹಗಳು ಹರಡುತ್ತಿವೆ.


