ಚಿಕ್ಕಮಗಳೂರು : ಕಡೂರು ತಾಲೂಕಿನ ಗ್ರಾಮವೊಂದರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪದ ಪ್ರಕಾರ, ಶಾಲೆಯ ಶಿಕ್ಷಕ ನಾಗರಾಜಪ್ಪ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅವರ ಕೈಯಲ್ಲಿ ಮನೆಯಿಂದ ಮೊಬೈಲ್ ಫೋನ್ ತರಿಸಿಕೊಂಡು ಅಶ್ಲೀಲ ವಿಡಿಯೋ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ವಿದ್ಯಾರ್ಥಿನಿಯರು ಧರಿಸಿಕೊಂಡು ಬಂದ ಉಡುಪುಗಳ ಬಗ್ಗೆ ಪ್ರಶ್ನಿಸಿ ಪರಿಶೀಲನೆ ನಡೆಸುತ್ತಿದ್ದ ಆರೋಪವೂ ಕೇಳಿಬಂದಿದೆ.
ಮೂವರು ಅಪ್ರಾಪ್ತ ಬಾಲಕಿಯರಿಗೂ ಇದೇ ರೀತಿಯ ಕಿರುಕುಳ ನೀಡಲಾಗಿದ್ದು, ಈ ವಿಷಯವನ್ನು ಯಾರಿಗೂ ಹೇಳದಂತೆ ಹೆದರಿಸಿ ದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪೋಷಕರು ಶಾಲೆಯ ಮುಖ್ಯೋಪಾಧ್ಯಾಯ ಲೋಕೇಶಪ್ಪ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬಾಲಕಿಯರ ಪ್ರತ್ಯೇಕ ದೂರುಗಳ ಆಧಾರದ ಮೇಲೆ ಯಗಟಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ನಾಗರಾಜಪ್ಪ ಹಾಗೂ ಮುಖ್ಯೋಪಾಧ್ಯಾಯ ಲೋಕೇಶಪ್ಪ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

