Wednesday, August 12, 2026
Homeಜಿಲ್ಲೆಮಂಗಳೂರು : ಹಿರಿಯ ನಾಟಕಕಾರ ಪರಮಾನಂದ ಸಾಲ್ಯಾನ್ ಅವರಿಗೆ ರಂಗಭಾಸ್ಕರ ಪ್ರಶಸ್ತಿ.

ಮಂಗಳೂರು : ಹಿರಿಯ ನಾಟಕಕಾರ ಪರಮಾನಂದ ಸಾಲ್ಯಾನ್ ಅವರಿಗೆ ರಂಗಭಾಸ್ಕರ ಪ್ರಶಸ್ತಿ.

ಮಂಗಳೂರು : ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ವರ್ಷಂಪ್ರತಿ ನೀಡುವ ಪ್ರತಿಷ್ಠಿತ ರಂಗಭಾಸ್ಕರ ಪ್ರಶಸ್ತಿಗೆ ಈ ಬಾರಿ ಹಿರಿಯ ನಾಟಕಕಾರ, ತುಳು ಸಾಹಿತಿ ಹಾಗೂ ಸಂಘಟಕರಾದ ಶ್ರೀ ಪರಮಾನಂದ ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರೀ ಉಡುಪಿ ವಿಶ್ವನಾಥ ಶೆಣೈ ಅವರ ಪ್ರಾಯೋಜಕತ್ವದಲ್ಲಿ, ದಿವಂಗತ ರಂಗಕರ್ಮಿ ಭಾಸ್ಕರ ನೆಲ್ಲಿತೀರ್ಥ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಗೆ ಪರಮಾನಂದ ಸಾಲ್ಯಾನ್ ಅವರನ್ನು ಡಾ. ನಾ. ದಾಮೋದರ ಶೆಟ್ಟಿ, ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಪ್ರಶಸ್ತಿಯು ಸ್ಮರಣಿಕೆ, ನಗದು ಬಹುಮಾನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿದ್ದು, ಜೂನ್ 21, 2026ರಂದು ಅವರ ಸ್ವಗೃಹದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ರಂಗಸಂಗಾತಿ ಸಂಸ್ಥೆಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅಗರಿ ಎಂಟರ್ಪ್ರೈಸಸ್‌ನ ಅಗರಿ ರಾಘವೇಂದ್ರ ರಾವ್, ರಂಗಸಂಗಾತಿ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ, ಬಂಟರ ಸಂಘದ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಹಿರಿಯ ನಟ ನವೀನ್ ಡಿ. ಪಡೀಲ್, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಜಗನ್ನಾಥ ಕಲ್ಲಾಪು, ಮೈಮ್ ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಬಿ. ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಪರಮಾನಂದ ಸಾಲ್ಯಾನ್ ಪರಿಚಯ:

ಪರಮಾನಂದ ಸಾಲ್ಯಾನ್ ಅವರು ಮುಂಗಾರು ಹಾಗೂ ಹೊಸ ದಿಗಂತ ದಿನಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಬಿಲ್ಲವರ ವಿಶ್ವವಾಣಿ ಮತ್ತು ಯುವವಾಹಿನಿ ಪತ್ರಿಕೆಗಳ ಸ್ಥಾಪಕ ಸಂಪಾದಕರಾಗಿ ಗುರುತಿಸಿಕೊಂಡಿದ್ದಾರೆ.
ಅವರು ರಂಗ ಸುದರ್ಶನ, ಪರಮ ಪದ್ಮ ಕಲಾವಿದರು ಹಾಗೂ ಸುದರ್ಶನ್ ಕ್ರಿಯೇಶನ್ಸ್ ಸಂಸ್ಥೆಗಳ ನಿರ್ದೇಶಕರಾಗಿ ದುಬೈ, ಅಬುದಾಬಿ ಸೇರಿದಂತೆ ದೇಶ-ವಿದೇಶಗಳಲ್ಲಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಸಾಕ್ಷ್ಯಚಿತ್ರ, ಕಿರುಚಿತ್ರ, ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ರಚನೆ ಮತ್ತು ನಿರ್ದೇಶನದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಅವರು, ತುಳು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದು, ನೂರಾರು ನಾಟಕಗಳು ಮತ್ತು ಪ್ರಹಸನಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular